ದಾವಣಗೆರೆ, ಸೆ.15- ದಲಿತರ ಮೇಲೆ ದೌರ್ಜನ್ಯ ಮಾಡುವವರಿಗೆ ಮರಣ ದಂಡನೆ ಯಂತಹ ಶಿಕ್ಷೆ ವಿಧಿಸುವುದೂ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ನಗರಪಾಲಿಕೆ ಆವರಣದಿಂದ ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇ ರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಘಟಕದ ಪದಾಧಿಕಾರಿಗಳು, ಉಪವಿಭಾಗಾಧಿ ಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿಜಯಪುರ ಜಿಲ್ಲೆಯಲ್ಲಿ ದೇವಸ್ಥಾನ ಕಟ್ಟೆ ಮೇಲೆ ಕುಳಿತಿದ್ದ ಯುವ ಮುಖಂಡನ ಮೇಲೆ ಮೇಲ್ಜಾತಿಯವರು ಅಮಾನುಷವಾಗಿ ಹಲ್ಲೆ ಮಾಡಿ, ಚಾಕುವಿನಿಂದ ಇರಿದು ಕೊಂದಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ದಲಿತರ ಮೇಲೆ ಮೇಲ್ಜಾತಿಯವರು ಹಲ್ಲೆ ಮಾಡಿ, ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ರಾಯಚೂರು ಜಿಲ್ಲೆ ತುರ್ವಿಹಾಳ ಪೊಲೀಸ್ ಠಾಣೆ ಅಧಿಕಾರಿ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಾ, ಸವರ್ಣೀಯರ ಪರ ಕೆಲಸ ಮಾಡುತ್ತಿದ್ದಾರೆ. ದಲಿತರ ಕೇಸು ದಾಖಲಿಸದೇ, ವಂಚಿಸುತ್ತಿದ್ದಾರೆ. ಆ ಸಬ್ಇನ್ಸ್ಪೆಕ್ಟರ್ಗೆ ಅಮಾನತ್ತು ಪಡಿಸಿ ತನಿಖೆಗೊಳಪಡಿಸಬೇಕು ಎಂದು ಸಮಿತಿ ಜಿಲ್ಲಾಧ್ಯಕ್ಷ ಎನ್. ಮಲ್ಲೇಶ್ ಕುಕ್ಕುವಾಡ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿಎಸ್ಓ ಜಿಲ್ಲಾಧ್ಯಕ್ಷ ಸಿ. ಬಸವರಾಜ, ಸಮಿತಿ ಮುಖಂಡರಾದ ಜಿ.ಹೆಚ್.ಶಂಭುಲಿಂಗಪ್ಪ, ಡಿ. ತಮ್ಮಣ್ಣ, ಎ. ಶ್ರೀನಿವಾಸ್, ಡಿ.ಜಿ. ಆಸೀಫ್ ಅಲಿ, ಯಲ್ಲಪ್ಪ, ಗುರುಮೂರ್ತಿ ಸೇರಿದಂತೆ ಇತರರಿದ್ದರು.