ಶಿಕ್ಷಕರಿಗೂ ವಾರಿಯರ್ಸ್ ಎಂದು ಪರಿಗಣಿಸಲು ಸರ್ಕಾರಕ್ಕೆ ಮನವಿ

ರಾಣೇಬೆನ್ನೂರು, ಸೆ.7- ಸೇವೆಯಲ್ಲಿರುವ ಶಿಕ್ಷಕರನ್ನು ವಾರಿಯರ್ಸ್ ಎಂದು ಪರಿಗಣಿಸಬೇಕು. ಕೋವಿಡ್‌ನಿಂದ ನಿಧನರಾದವರಿಗೆ ಇತರರಿಗೆ ಕೊಡುವ ಧನಸಹಾಯ ಕೊಡು ವಂತೆ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಶಾಸಕ ಅರುಣಕುಮಾರ ಗುತ್ತೂರ ಹೇಳಿದರು.

ಇಲ್ಲಿನ ಶಿಕ್ಷಕರ ಸಹಕಾರಿ ಸಂಘದ ಸಭಾ ಭವನದಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ, ಶಿಕ್ಷಕರು ಮಾಡಿದ ಮನವಿಗಳನ್ನು ಪ್ರಸ್ತಾಪಿಸಿ ಅವರು ಮಾತನಾಡುತ್ತಿದ್ದರು.

ಈಗಿರುವ ಈ ಭವನ ಚಿಕ್ಕದಾಗಿದ್ದು, ನಗರದ ನೂತನ ಬಡಾವಣೆಯಲ್ಲಿ 20  ಗುಂಟೆ ನಿವೇಶನ ಮತ್ತು ಸದರಿ ನಿವೇಶನದಲ್ಲಿ ಸುಸಜ್ಜಿತ ಕಟ್ಟಡವನ್ನೂ ಸಹ ಕಟ್ಟಿಸಿ ಮುಂದಿನ ಶಿಕ್ಷಕರ ದಿನಾಚರಣೆ ಒಳಗಾಗಿ ಕೊಡುವುದಾಗಿ ಶಾಸಕರು ಭರವಸೆ ನೀಡಿದರು. 

ತಪ್ಪಿತಸ್ಥರನ್ನು ಸರಿದಾರಿಗೆ ತರುವ ಶಿಕ್ಷಕರು ತಪ್ಪುಗಳನ್ನು ಮಾಡಬಾರದು ಎಂದ ಶಾಸಕರು,   ಉತ್ತಮ ನಾಗರಿಕರನ್ನು ತಯಾರು ಮಾಡಿ ಬಲಿಷ್ಠ ರಾಷ್ಟ್ರ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದುದು ಎಂದರು.

ಜಿ.ಪಂ ಸದಸ್ಯರಾದ ಏಕನಾಥ್ ಭಾನು ವಳ್ಳಿ, ಶಿವಾನಂದ ಕನ್ನಪ್ಪಳವರ, ಮಂಗಳಗೌರಿ ಪೂಜಾರ, ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರಿ ಹೊನ್ನಾಳಿ, ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ, ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ, ತಹಶೀಲ್ದಾರ್ ಬಸನಗೌಡ ಕೋಟೂರ, ಇಲಾಖೆ ಅಧಿಕಾರಿ ಶ್ರೀಧರ, ಈಓ ಎಸ್.ಎಂ.ಕಾಂಬಳೆ ಮತ್ತಿತರಿದ್ದರು.

error: Content is protected !!