ರಾಣೇಬೆನ್ನೂರಿನದ್ದೇ ಜಿಲ್ಲೆಗೆ ಪ್ರಥಮ
ರಾಣೇಬೆನ್ನೂರು, ಸೆ.3- ಕೊರೊನಾ ಸೋಂಕು ತಡೆಗಟ್ಟಲು ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಇದು ಪ್ರತಿಯೊಬ್ಬರ ಪ್ರತಿನಿತ್ಯದ ಜವಾಬ್ದಾರಿಯಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣನವರ ಹೇಳಿದರು.
ಅವರು ಇಂದು ಇಲ್ಲಿನ ಓಂ ಆಸ್ಪತ್ರೆಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಕೋವಿಡ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಜನರ ಬೇಜವಾಬ್ದಾರಿಯಿಂದಾಗಿ ರೋಗ ಉಲ್ಭಣಗೊಳ್ಳುತ್ತಿದೆ. ಸರ್ಕಾರ ಸಾಕಷ್ಟು ಕ್ರಮ ಕೈಗೊಂಡರೂ ಸಹ ಜನರ ಸಹಕಾರ ಇಲ್ಲದೆ ಯಾವ ಕಾರ್ಯ ಸಾಧಿಸಲು ಆಗುವುದಿಲ್ಲ. ಜನರ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ತಿಂಗಳೊಳಗೆ ಸುಮಾರು 8 ಸಾವಿರ ಸೋಂಕು ಪ್ರಕರಣಗಳು ದಾಖಲಾಗಲಿವೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಈ ದಿಶೆಯಲ್ಲಿ ಇನ್ನೂ ಹೆಚ್ಚು ಖಾಸಗಿ ವೈದ್ಯರುಗಳು ರೋಗದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಪ್ರಥಮವಾಗಿ ರಾಣೇಬೆನ್ನೂರಿನಲ್ಲಿ ಆಸ್ಪತ್ರೆ ಪ್ರಾರಂಭಿಸಿದ ಬಗ್ಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಈ ದಿಶೆಯಲ್ಲಿ ಉಳಿದ ವೈದ್ಯರು ಕೈ ಜೋಡಿಸಲು ಮನವಿ ಮಾಡಿದರು.
ಓಂ ಆಸ್ಪತ್ರೆಯ ಡಾ. ಮನೋಜ ಸಾಹುಕಾರ, ಡಾ. ನಾಗರಾಜ ದೊಡ್ಮನಿ, ಡಾ.ರವಿ. ಕುಲ್ಕರ್ಣಿ, ರುಕ್ಮಿಣಿ ಸಾಹುಕಾರ ಮತ್ತಿತರರಿದ್ದರು.