ಐಷಾರಾಮಿ ಜೀವನ ಕಾಯಿಲೆ ತರುತ್ತದೆ: ಶ್ರೀ ಬಸವ ಪ್ರಭು ಸ್ವಾಮೀಜಿ

ದಾವಣಗೆರೆ, ಆ.29- ಬಸವಣ್ಣನವರು ಕಾಯಕವೇ ಕೈಲಾಸ ಎಂದರು, ಕಾಯಕ ಯೋಗಿಯಾಗಿದ್ದರು. ದೈಹಿಕ ಶ್ರಮದಿಂದ ಎನರ್ಜಿ ಉತ್ಪಾದನೆ ಆಗುತ್ತದೆ. ಚೆನ್ನಾಗಿ ಕೆಲಸ ಮಾಡುವುದರ ಮೂಲಕ ನಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಆಶೀರ್ವಚನ ನೀಡಿದರು. 

ನಗರದ ಶಿವಯೋಗ ಮಂದಿರದಲ್ಲಿ ಪ್ರಗತಿಪರ ರೈತ ಮುಖಂಡ ಹಾಗೂ ಹೋರಾಟಗಾರ ತೇಜಸ್ವಿ ಪಟೇಲ್‍ ಅವರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು.

ಐಷಾರಾಮಿ ಜೀವನ ಮಾಡುತ್ತಾ ಕುಳಿತರೆ ಕಾಯಿಲೆಗಳು ಬರುತ್ತವೆ. ಸದಾ ಕೆಲಸದಲ್ಲಿ ತೊಡಗುವುದರ ಮೂಲಕ ಸಕ್ರಿಯವಾಗಬೇಕು. ಕೊರೊನಾ ಸಂಕಷ್ಟದಲ್ಲಿರುವವರಿಗೆ ಜನತಾ ಬಂಧು ಮೀಡಿಯಾ ಬಳಗ ಸಾಂತ್ವನ ಹೇಳುವ ಮೂಲಕ `ಕನ್ನಡ ನಾಡು ಕಟ್ಟೋಣ ಬನ್ನಿ’ ಎಂಬ ಕಾರ್ಯಕ್ರಮ ಮಾಡುತ್ತಿರುವುದು ಅಭಿನಂದನೀಯ ಎಂದರು.

ಬುಳಸಾಗರದ ಸಿದ್ರಾಮಣ್ಣ ಮಾತನಾಡಿ, ವಿ.ಹೆಚ್. ಪಟೇಲ್ ಮತ್ತು ನಾವು 80ರ ದಶಕದಲ್ಲಿ ರೈತ ಚಳುವಳಿಯ ಸಂಘಟನೆ ಮಾಡಿದ್ದೆವು. ಅವರ ಪುತ್ರ ತೇಜಸ್ವಿ ಪಟೇಲ್‌ ಅನೇಕ ರೈತ ಚಳುವಳಿಯಲ್ಲಿ ಹೋರಾಟ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು. 

ಅತಿಥಿಯಾಗಿ ಕನ್ನಡ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸುವರ್ಣಮ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂ. ರಾಜ್‍ಕುಮಾರ್, ಹರೀಶ್, ಪಲ್ಲವಿ ಉಪಸ್ಥಿತರಿದ್ದರು.

error: Content is protected !!