ಕೂಡ್ಲಿಗಿ, ಡಿ.5- ಗೌರಿಹಬ್ಬ ಎಂದರೆ ಅಣ್ಣ-ತಂಗಿಯರ ಹಾಗೂ ಸೊಸೆ ಮಾವಂದಿರ ಭಾವನಾತ್ಮಕ ಸಂಬಂಧಕ್ಕೆ ಬೆಸುಗೆ ಹಾಕುವ ಹಬ್ಬ ಎನ್ನಲಾಗುತ್ತಿದೆ. ಕೆಲವು ಪ್ರತಿಷ್ಠಿತ ಮನೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಮಾತ್ರ ಪ್ರತಿಷ್ಠಾಪಿಸುವ ಗೌರಮ್ಮನ ವಿಗ್ರಹಕ್ಕೆ ಗೌರಿ ಹುಣ್ಣಿಮೆ ರಾತ್ರಿಯಂದು ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವ ಮೂಲಕ ಹಬ್ಬ ಪರಿಪೂರ್ಣ ವಾಗಲಿದೆ. ಮಕ್ಕಳು, ಹೆಂಗಳೆಯರು ಗೌರಿಗೆ ಆರತಿ ಬೆಳಗಲು ಓಡಾಡುವ ಹೆಣ್ಣು ಮಕ್ಕಳ ಸಂಭ್ರಮ ಹೇಳತೀರದು. ಸಕ್ಕರೆ ಗೊಂಬೆಗಳಿರುವ ತಟ್ಟೆಯಲ್ಲಿ ದೀಪ ಹಚ್ಚಿಕೊಂಡು ಗೌರಮ್ಮನ ವಿಗ್ರಹಕ್ಕೆ ಆರತಿ ಎತ್ತಿ, ಆ ಬಳಿಕ ಕುಟುಂಬದ ಸದಸ್ಯರಿಗೆ, ನೆರೆ-ಹೊರೆಯವರಿಗೆ, ಸಂಬಂಧಿಕರಿಗೆ ಆರತಿ ಬೆಳಗುವ ಸಂಪ್ರದಾಯ ಕಾಣಬಹುದಾಗಿದೆ.
ಹಲವು ಕುಟುಂಬಗಳು ಕೆಲವೆಡೆ ಗೌರಿಹಬ್ಬಕ್ಕಿಂತ ತಿಂಗಳ ಮೊದಲೇ ಸಕ್ಕರೆ ಗೊಂಬೆಗಳ ತಯಾರಿಕೆಯಲ್ಲಿ ತೊಡಗುತ್ತಾರೆ.
ಸಕ್ಕರೆ ಗೊಂಬೆ ತಯಾರಿಕೆ ಒಂದು ಕಲೆ : ಶುದ್ಧ ಸಕ್ಕರೆಗೆ ತಕ್ಕಂತೆ ನೀರು, ನಿಂಬೆರಸ, ಹಾಲು, ಏಲಕ್ಕಿ ಹಾಕಿ ಒಲೆಯ ಮೇಲೆ ಹದ ಬರುವ ಹಾಗೆ ಕಾಯಿಸಲಾಗುತ್ತದೆ. ಆ ಬಳಿಕ ಅದನ್ನು ಗೊಂಬೆ ತಯಾರಿಕೆಯ ಕಟ್ಟಿಗೆ ಅಚ್ಚುಗಳಿಗೆ ಹಾಕಿದಾಗ ಕೆಲವೇ ಸಮಯದಲ್ಲಿ ಬಗೆಬಗೆಯ ಗೊಂಬೆಗಳು ಸಿದ್ಧವಾಗುತ್ತವೆ.
ಆಕರ್ಷಿಸುವ ವಿನ್ಯಾಸಗಳು : ಜನರಲ್ಲಿರುವ ಭಕ್ತಿ, ಭಾವನೆಗಳಿಗೆ ತಕ್ಕಂತೆ ಶಿವ, ಪಾರ್ವತಿ, ಒಂಟೆ, ಆನೆ, ರಥ, ಅರ್ಜುನನ ಬಿಲ್ಲು, ಮಂಟಪ, ಆಂಜನೇಯ, ಬಸವಣ್ಣ, ವಿವಿಧ ರೀತಿಯ ಪಶುಪಕ್ಷಿಗಳು ಹೀಗೆ ಅನೇಕ ಕಲಾಕೃತಿಗಳಲ್ಲಿ ವಿವಿಧ ಬಣ್ಣಗಳಲ್ಲಿ ಆಕರ್ಷಿಸುತ್ತವೆ.
ಹೊಸದಾಗಿ ಮದುವೆ ನಿಶ್ಚಯಗೊಂಡ ವರನ ಕಡೆಯವರು ವಧುವಿನ ಮನೆಗೆ ಗೌರಿ ಹುಣ್ಣಿಮೆಯಂದು ದಂಡಿಯ ಜೊತೆಗೆ ಸಕ್ಕರೆ ಗೊಂಬೆಗಳನ್ನು ತೆಗೆದುಕೊಂಡು ಬರುವ ಸಂಪ್ರದಾಯವಿದೆ.
ಸಕ್ಕರೆ ಆರತಿ ತಯಾರಕ ಕೂಡ್ಲಿಗಿ ಪಟ್ಟಣದ ವಡ್ರಳ್ಳಿ ಸೋಮಣ್ಣ ತಿಳಿಸಿದಂತೆ, ಗೌರಿ ಹುಣ್ಣಿಮೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಸಕ್ಕರೆ ಆರತಿಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಲಾಗುವುದು ಎನ್ನುತ್ತಾರೆ. ಸಕ್ಕರೆ ಗೊಂಬೆಯ ಆರತಿಗಳು ಕೆ.ಜಿ.ಗೆ 80 ರಿಂದ 140 ರೂ, ಬಣ್ಣ ಬಣ್ಣ ದಂಡಿಗಳು ಒಂದಕ್ಕೆ 40 ರಿಂದ 50 ರೂ. ಕೊಲುಂಗುರ 25 ರಿಂದ 40 ರೂ.ಗೆ ಮಾರಾಟವಾಗುತ್ತಿದ್ದವು.
ಈ ವರ್ಷವೂ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಸದ್ಯ ಕೆ.ಜಿಗೆ 100 ರೂ. ರಿಂದ 120 ರೂ.ವರೆಗೂ ಮಾರಾಟ ಮಾಡಲಾಗುತ್ತದೆ. ಹಬ್ಬದ ದಿನದಂದು 120 ರಿಂದ 160 ರೂ.ಗೆ ಸಕ್ಕರೆ ಆರತಿಗಳನ್ನು ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ.
ವ್ಯಾಪಾರಸ್ಥರು, ಕೂಡ್ಲಿಗಿ ಪಟ್ಟಣದಲ್ಲಿ ಐದಾರು ತಯಾರಕರಿದ್ದಾರೆ, ತಾಲ್ಲೂಕಿನಾ ದ್ಯಂತ ಒಟ್ಟಾರೆ ನೂರಾರು ಸಕ್ಕರೆ ಆರತಿ ತಯಾರಕರಿದ್ದಾರೆ. ಬೆಲೆ ಸೇರಿದಂತೆ ತಯಾರಿಕೆ ಯಲ್ಲಿ ಬಳಸಲಾಗುವ ವಿವಿಧ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಸಹಜವಾಗಿ ಗೊಂಬೆಗಳ ಬೆಲೆ ಹೆಚ್ಚಾಗಿದೆ ಎನ್ನುತ್ತಾರವರು. ನಮಗೆ ಲಾಭ ಗಳಿಕೆ ಉದ್ದೇಶವಿಲ್ಲ ತಲೆತಲಾಂ ತರದಿಂದ ಮಾಡಿಕೊಂಡು ಬಂದಿದ್ದು, ಸಂಪ್ರದಾಯ ಪಾಲನೆಗಾಗಿ ಗೊಂಬೆ ತಯಾರಿಕೆಯಲ್ಲಿ ತೊಡಗಿರುವುದಾಗಿ ವಡ್ರಳ್ಳಿ ಸೋಮಪ್ಪ ಹಾಗೂ ಕುಟುಂಬ ಹೇಳುತ್ತಾರೆ.