ಮಾತಿಗೆ ಬರವಣಿಗೆ ಮೂಲಕ ಚೈತನ್ಯ ತುಂಬಿದವರು ಶರಣರು

ಮಾತಿಗೆ ಬರವಣಿಗೆ ಮೂಲಕ ಚೈತನ್ಯ ತುಂಬಿದವರು ಶರಣರು - Janathavaniದಾವಣಗೆರೆ, ಡಿ.2- ಮಾತಿಗೆ ಬರವಣಿಗೆ ಮೂಲಕ ಚೈತನ್ಯ ತುಂಬಿದವರು ಶಿವ ಶರಣರು ಎಂದು ಸಾಣೇಹಳ್ಳಿ ಶ್ರೀಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಗ್ರಂಥಸರಸ್ವತಿ ಪ್ರತಿಭಾ ರಂಗವು ನವೆಂಬರ್ 1 ರಿಂದ 30 ರವರೆಗೆ ಹಮ್ಮಿಕೊಂಡಿದ್ದ ಅಂತರ್ಜಾಲಿತ ಕನ್ನಡಕಬ್ಬ ಉಗಾದಿಹಬ್ಬ ಕವಿಕಾವ್ಯ ಚಿಂತನಾ ಲಹರಿಯ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ, ಶ್ರೀಗಳು ‘ವಚನಕಾರರು ಮತ್ತು ಕನ್ನಡ ಭಾಷೆ’ ವಿಷಯ ಕುರಿತು ಮಾತನಾಡಿದರು. 

ಶರಣರು ಮಾತನ್ನು ದೇವನೊಲಿಸುವ ಸಾಧನವನ್ನಾಗಿಯೂ ಮಾಡಿಕೊಂಡರು. ಭಾಷೆ ಅವರ ಸಂಸ್ಕೃತಿ,  ಸಂಸ್ಕಾರಗಳ ಪ್ರತಿಬಿಂಬವಾಗಿರುವುದು ಶರಣರ ವಚನಗಳ ಅಧ್ಯಯನದಿಂದ ವ್ಯಕ್ತವಾಗುತ್ತದೆ. ವಚನಾಕಾರರು ಭಾಷೆಯ ಮೂಲಕವೇ ನೈತಿಕ ಮೌಲ್ಯ ಎತ್ತಿ ಹಿಡಿದರು. ಆರ್ಥಿಕ ಸುಧಾರಣೆಯ ಸಾಧನ ಮಾಡಿಕೊಂಡರು. ಆದರ್ಶ ಬದುಕಿನ ಬಂಡವಾಳ ವಾಗಿಸಿ ಕೊಂಡರು ಎಂಬುದಾಗಿ ಶ್ರೀಗಳು ನುಡಿದರು.

ಜನರಾಡುವ ಭಾಷೆಯ ಒರಟುತನ, ಕೆಟ್ಟ ಪದಗಳ ಬಳಕೆ ಬಿಟ್ಟು ಭಕ್ತಿ ಹೊರ ಹೊಮ್ಮುವಂತಹ ಮಾತುಗಳನ್ನು ಶರಣರು ಕಲಿಸಿದರು. ಅವರ ಯಾವುದೇ ವಚನದಲ್ಲಿ  ಆರ್ಥಿಕ, ನೈತಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಹೀಗೆ ಒಂದಲ್ಲೊಂದು ಮೌಲ್ಯಗಳನ್ನು ಗುರುತಿಸಬಹುದಾಗಿದೆ ಎಂದರು.

ಮಾತು ಮನುಷ್ಯತ್ವಕ್ಕೆ ವಿಶೇಷ ಮೆರಗು ತರುವಂತಿರಬೇಕು ಎನ್ನುವುದು ಶರಣ ಚಿಂತನೆಯಾಗಿತ್ತು. ಅದಕ್ಕೆ ಅವರ ಮಾತುಗಳು ವಚನಗಳಾಗಿ, ಪ್ರಮಾಣಗಳಾಗಿ ಇಂದಿಗೂ ಉಳಿದುಕೊಂಡು ಬಂದಿವೆ. ಭಾಷೆಯ ಮೂಲಕ ಸುಂದರ ಸಮಾಜ ಕಟ್ಟುವ ಸದಾಶಯ ಶರಣರದ್ದಾಗಿತ್ತು ಎಂದರು.

ಇನ್ನೋರ್ವ ಅತಿಥಿ  ವಿಶ್ರಾಂತ ಪ್ರಾಧ್ಯಾಪಕ  ಪ್ರೊ.ಕೆ.ಆರ್.ಸಿದ್ದಪ್ಪ,  ‘ವಿದೇಶಿಗರ ಕಂಡ ವಿಜಯನಗರ ವೈಭವ’ ವಿಷಯ ಕುರಿತು ಮಾತನಾಡಿದರು.

ಸುಶ್ರಾವ್ಯ ಸಂಗೀತ ವಿದ್ಯಾಲಯದ ಶಿಕ್ಷಕಿ ಶ್ರೀಮತಿ ಯಶಾ ದಿನೇಶ್ ಹಾಗೂ ಬಂಧು-ಮಿತ್ರರು, ಶರಧಿ ಸಂಗೀತ ಶಾಲೆಯ ಶಿಕ್ಷಕಿ ಶ್ರೀಮತಿ ಶೋಭಾ ರಂಗನಾಥ ಹಾಗೂ ಶಿಷ್ಯಂದಿರು, ಕದಳಿ ವೇದಿಕೆಯ ಗಾನಗಂಧರ್ವ ತಂಡದ ಸಂಗೀತ ಶಿಕ್ಷಕಿ ಶ್ರೀಮತಿ ಕೆ.ಪಿ.ಮಂಜುಳಾ ಹಾಗೂ ಮಹಿಳಾ ಸದಸ್ಯೆಯರು ಮತ್ತು ದೇವನಗರಿಯ ಸಂಗೀತ ಶಿಕ್ಷಕಿ  ಶ್ರೀಮತಿ ಉಮಾ ಶ್ರೀನಿವಾಸ ಮತ್ತು ಸುಪ್ರಭಾ ಸುರೇಶ ಇವರುಗಳೆಲ್ಲರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.

ಶ್ರೀಮತಿ ಐಶ್ವರ್ಯ ವೈಶ್ರವಣ ಅತಿಥಿಗಳನ್ನು ಪರಿಚಯಿಸಿದರು. ಕು. ಸ್ವರ್ಣಗೌರಿ ಎಸ್. ಕುರ್ಕಿ ‘ಶಿವಸ್ತುತಿ’ ಭರತನಾಟ್ಯ ಪ್ರದರ್ಶನ ನೀಡಿದರು. ಗ್ರಂಥಸರಸ್ವತಿ ಪ್ರತಿಭಾರಂಗದ ಅಧ್ಯಕ್ಷ ಆರ್. ಶಿವಕುಮಾರಸ್ವಾಮಿ ಕುರ್ಕಿ ನಿರೂಪಿಸಿದರು.

error: Content is protected !!