ಬ್ರಿಟನ್ ಜನರಿಗೆ ಸಿಕ್ಕಿತು ಕೊರೊನಾ ಲಸಿಕೆ

ಲಂಡನ್, ಡಿ. 2 – ಕೊರೊನಾ ಸೋಂಕಿನ ವಿರುದ್ಧ ಫಿಜರ್-ಬಯಾನ್‌ಟೆಕ್ ಕಂಪನಿಗಳು ರೂಪಿಸಿರುವ ಲಸಿಕೆಯನ್ನು ಜನ ಸಮುದಾ ಯಕ್ಕೆ ಬಳಸಲು ಬ್ರಿಟನ್ ಒಪ್ಪಿಗೆ ನೀಡಿದೆ. ಕೊರೊನಾ ವಿರುದ್ಧ ಲಸಿಕೆ ಬಳಕೆಗೆ ಒಪ್ಪಿಗೆ ನೀಡಿದ ಮೊದಲ ದೇಶ ಬ್ರಿಟನ್ ಆಗಿದೆ.

ಬ್ರಿಟನ್‌ನ ಔಷಧ ನಿಯಂತ್ರಕರಾದ ಮೆಡಿಸಿನ್ಸ್ ಅಂಡ್ ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ (ಎಂ.ಹೆಚ್.ಆರ್.ಎ.) ಲಸಿಕೆ ಪ್ರಯೋಗಕ್ಕೆ ಒಪ್ಪಿಗೆ ನೀಡಿದೆ. ಈ ಲಸಿಕೆ ಶೇ.95ರಷ್ಟು ಪರಿಣಾಮಕಾರಿ ಹಾಗೂ ಸುರಕ್ಷಿತವಾಗಿದೆ ಎಂದು ನಿಯಂತ್ರಕ ಹೇಳಿದೆ.

ತ್ವರಿತವಾಗಿ ಲಸಿಕೆಯ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಆದರೆ, ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆಯಾಗಿಲ್ಲ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ.

ಕೊರೊನಾ ವಿರುದ್ಧ ಹೋರಾಟಕ್ಕೆ ನೆರವು ಲಭ್ಯವಾಗುತ್ತಿದೆ. ಕಾರ್ಗತ್ತಲು ಅಂತ್ಯವಾಗುತ್ತಿದೆ. 2020 ಕಠಿಣವಾಗಿತ್ತು, ಆದರೆ 2021 ಬೆಳಗಲಿದೆ ಎಂದು ಬ್ರಿಟನ್ ಆರೋಗ್ಯ ಕಾರ್ಯ ದರ್ಶಿ ಮ್ಯಾಟ್ ಹ್ಯಾನ್‌ಕಾಕ್ ಹೇಳಿದ್ದಾರೆ.

ಕೊರೊನಾದ ಅಪಾಯ ಅತಿ ಹೆಚ್ಚಾಗಿರುವ ವರ್ಗಕ್ಕೆ ಲಸಿಕೆ ನೀಡಲು ಬ್ರಿಟನ್ ಸರ್ಕಾರ ಔಪಚಾರಿಕ ಒಪ್ಪಿಗೆ ನೀಡಿದೆ. ಕೆಲ ದಿನಗಳ ಅಂತರದಲ್ಲಿ ಲಸಿಕೆಯ ಎರಡು ಡೋಸ್‌ಗಳನ್ನು ತೋಳಿಗೆ ನೀಡಲಾಗುವುದು. ಶೀಘ್ರದಲ್ಲೇ 1 ಕೋಟಿ ಲಸಿಕೆಗಳು ಲಭ್ಯವಾಗಲಿವೆ. ಮೊದಲ 8 ಲಕ್ಷ ಲಸಿಕೆಗಳು ಶೀಘ್ರದಲ್ಲೇ ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಯಾನ್‌ಟೆಕ್ ಕಂಪನಿಯು ಜರ್ಮನಿಯಲ್ಲಿ ಹೊಂದಿರುವ ಉತ್ಪಾದನಾ ಘಟಕಗಳು ಹಾಗೂ ಫಿಜರ್ ಬೆಲ್ಜಿಯಂನಲ್ಲಿ ಹೊಂದಿರುವ ಉತ್ಪಾದನಾ ಘಟಕಗಳೆರಡರಲ್ಲೂ ಉತ್ಪಾದನೆ ನಡೆಯುತ್ತಿದೆ. ಲಸಿಕೆಯನ್ನು ಶೂನ್ಯಕ್ಕಿಂತ 70 ಡಿಗ್ರಿ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕಿದೆ. ಲಸಿಕೆ ಪೂರೈಕೆಯಾದ ನಂತರ ಐದು ದಿನಗಳವರೆಗೆ ಅದನ್ನು ಫ್ರಿಜ್‌ನಲ್ಲಿ ಇಡಬಹುದಾಗಿದೆ. 

ಲಸಿಕೆಗೆ ಅಗತ್ಯವಾದ ಉನ್ನತ ಶೀತಲೀಕರಣ ಘಟಕಗಳನ್ನು ಹೊಂದುವ ವಿಶ್ವಾಸ ಬ್ರಿಟನ್‌ಗಿದೆ. ಪೂರೈಕೆಯಾದ ನಂತರ ಐದು ದಿನಗಳವರೆಗೆ ಲಸಿಕೆಯನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್‌ ತಾಪಮಾನದ ಫ್ರಿಜ್‌ಗಳಲ್ಲಿ ಇಡಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫಿಜರ್ ಹಾಗೂ ಬಯಾನ್‌ಟೆಕ್‌ಗಳು ಲಸಿಕೆಯ ಅಂತಿಮ ಪ್ರಯೋಗದ ಫಲಿತಾಂಶವನ್ನು ನವೆಂಬರ್ 18ರಂದು ಪ್ರಕಟಿಸಿದ್ದವು. ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿದ್ದು, ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ತಿಳಿಸಲಾಗಿತ್ತು.

ಸಾಮಾನ್ಯವಾಗಿ ಲಸಿಕೆಗಳು ರೂಪುಗೊಳ್ಳಲು ದಶಕಗಳೇ ಬೇಕಾಗುತ್ತವೆ. ಆದರೆ, ಈ ಬಾರಿ ಕೊರೊನಾ ಲಸಿಕೆ ಕೇವಲ ಹತ್ತು ತಿಂಗಳಲ್ಲಿ ಅದೇ ಪ್ರಕ್ರಿಯೆಗಳನ್ನು ಪೂರೈಸಿ ರೂಪುಗೊಂಡಿದೆ ಎಂದು ಬಿ.ಬಿ.ಸಿ. ಸುದ್ದಿಸಂಸ್ಥೆ ವರದಿ ಮಾಡಿದೆ.

error: Content is protected !!