ಹರಪನಹಳ್ಳಿ, ನ. 7- ರಾಜ್ಯದಲ್ಲೂ ಸಹ ಲವ್ ಜಿಹಾದ್ ಮಟ್ಟ ಹಾಕಲು ಕಠಿಣ ಕಾನೂನು ರೂಪಿಸಲು ಸಲಹೆ ಪಡೆದುಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಚರ್ಚಿಸಿ ಸೂಕ್ತ ಪರಿಹಾರ ನೀಡಲು ರಾಜ್ಯ ಸರ್ಕಾರ ಸಿದ್ದವಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮಲು ಹೇಳಿದರು.
ಬಿಜೆಪಿ ಮುಖಂಡ ಕೋಡಿಹಳ್ಳಿ ಭೀಮಪ್ಪ ಅವರ ನಿವಾಸದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಕಾಲೇಜು ತರಗತಿಗಳನ್ನು ಪ್ರಾರಂಭಿಸಲು ಹಾಗೂ ಅವರಿಗೆ ವಸತಿ ನಿಲಯಗಳಲ್ಲಿ ತಂಗಲು ಕೋವಿಡ್ ನಿಯಮಗಳನ್ವಯ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಇದೇ ದಿನಾಂಕ 17ಕ್ಕೆ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರ ಆದೇಶ ನೀಡಿದೆ. ಈಗಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳನ್ನು ಬಳಸಿಕೊಳ್ಳಲಾಗುವುದು. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕೋವಿಡ್‍ನಿಂದ ರಕ್ಷಿಸಲು ಸ್ಯಾನಿಟೈಸರ್, ವೈದ್ಯರು, ನರ್ಸ್ ಹಾಗೂ ತುರ್ತು ಚಿಕಿತ್ಸೆಗೆ ವಸತಿ ನಿಲಯದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲು ಕ್ರಮ ಜರುಗಿಸಲಾಗಿದೆ ಎಂದರು.
ಅಕ್ಕ-ಪಕ್ಕದ ರಾಜ್ಯಗಳಲ್ಲಿ ಶಾಲೆ ಪ್ರಾರಂಭಿಸಿದ ಪರಿಣಾಮ ಹೆಚ್ಚು ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದನ್ನು ಮನಗಂಡು ಕಾಲೇಜು ಶಿಕ್ಷಣವನ್ನು ಮಾತ್ರ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ.
1.50 ಲಕ್ಷಕ್ಕೂ ಅಧಿಕ ಕಾಲೇಜ್ ವಿದ್ಯಾರ್ಥಿಗಳಿದ್ದಾರೆ. ಅವರಿಗೆಲ್ಲಾ ವೈಫೈ ತಂತ್ರಾಂಶದ ಮೂಲಕ ಆನ್‍ಲೈನ್ ಶಿಕ್ಷಣ ನೀಡಲು ಲ್ಯಾಪ್‍ಟ್ಯಾಪ್ ನೀಡುವ ಚಿಂತನೆಯಿದೆ. ಮಕ್ಕಳ ಜೀವ ಮುಖ್ಯವಾಗಿದ್ದು ಅವರ ಸುರಕ್ಷತೆ ಪ್ರಮುಖವಾಗಿದೆ ಎಂದರು.
ಮುಖಂಡರಾದ ಜಿ.ನಂಜನಗೌಡ, ಕೋಡಿಹಳ್ಳಿ ಭೀಮಪ್ಪ, ಟಿ.ಉಮಾಕಾಂತ, ತೆಲಗಿ ಮಂಜುನಾಥ, ದ್ಯಾಮಜ್ಜಿ ಆನಂದ ಹಾಗೂ ಇತರರು ಉಪಸ್ಥಿತರಿದ್ದರು.