ಆಂಗ್ಲ ಭಾಷೆಯಿಂದಲೇ ಎಲ್ಲವನ್ನೂ ಸಾಧಿಸುತ್ತೇವೆಂಬ ಮನೋಭಾವನೆಯಿಂದ ಹೊರಬರಬೇಕು : ಡಿಡಿಪಿಐ

ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದಿಂದ ಪ್ರತಿಭಾ ಪುರಸ್ಕಾರ

ದಾವಣಗೆರೆ, ನ.3- ಕನ್ನಡಿಗರಾದ ನಾವುಗಳು‌ ಆಂಗ್ಲ ಭಾಷೆಯಿಂದಲೇ ಎಲ್ಲವನ್ನೂ ಸಾಧಿಸುತ್ತೇವೆ ಎಂಬ ಮನೋಭಾವನೆ ಹೊಂದಿದ್ದೇವೆ. ಅದರಿಂದ ಹೊರಬರಬೇಕಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ತಿಳಿಸಿದರು.

ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣ ದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸಹಯೋಗದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ, 625ಕ್ಕೆ 600ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಯುರೋಪಿಯನ್ ದೇಶಗಳಲ್ಲಿ ಇಂಗ್ಲೀಷ್ ಭಾಷೆಗೆ ಮಾನ್ಯತೆಯೇ ನೀಡುವುದಿಲ್ಲ. ಆಯಾ ರಾಷ್ಟ್ರಗಳಲ್ಲಿ ಮಾತೃ ಭಾಷೆಗೆ ಮಹತ್ವ ನೀಡಿ ಅದರಲ್ಲೇ ಪ್ರಗತಿಯನ್ನು ಕಾಣುತ್ತಿದ್ದಾರೆ. ಕನ್ನಡ ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆ. ಈ ತಾಯಿ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಅವರು ಆಶಿಸಿದರು. 

ದೇಶದಲ್ಲಿನ ಸಾಧಕರಲ್ಲಿ ಹೆಚ್ಚಿನವರು ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಈಗಲೂ ಗ್ರಾಮೀಣ ಪ್ರದೇಶದ ಅದರಲ್ಲೂ ಕುಗ್ರಾಮದಿಂದ ಬಂದಿರುವ ಅದಷ್ಟೋ ಮಕ್ಕಳು ಸಾಧನೆ ಮಾಡಿರುವುದು ಮಾತೃ ಭಾಷೆಯಲ್ಲಿ ಅನ್ನುವುದನ್ನು ನಾವುಗಳು ತಿಳಿಯಬೇಕಿದೆ ಎಂದು ಪೋಷಕರಿಗೆ ಕಿವಿಮಾತು ಹೇಳಿದರು. 

ಡಯಟ್ ಪ್ರಾಂಶುಪಾಲ ಪ್ರೊ. ಹೆಚ್.ಕೆ. ಲಿಂಗರಾಜ್ ಮಾತನಾಡಿ, ಹತ್ತಿ, ಎಣ್ಣೆ, ಟೆಕ್ಸ್‍ಟೈಲ್ ಮಿಲ್, ಗುಡಿ ಕೈಗಾರಿಕೆ ಸೇರಿದಂತೆ ನಾನಾ ಕೈಗಾರಿಕೆಗಳಿಂದಾಗಿ ಕರ್ನಾಟಕದ ಮ್ಯಾಂಚೆಸ್ಟರ್ ಖ್ಯಾತಿ ಹೊಂದಿದ್ದ ದಾವಣಗೆರೆ ಕ್ರಮೇಣ ಕಾರ್ಖಾನೆಗಳು ಬಂದ್ ಆದ ನಂತರ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಲಕ ಕರ್ನಾಟಕದ ಕೇಂಬ್ರಿಡ್ಜ್ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ನಾಡಿನ ಕೇಂದ್ರ ಬಿಂದುವಾದ ಈ ಊರು ದಾನಿಗಳ ತವರಾಗಿದೆ. ಒಂದು ಕಾಲದ ಕೈಗಾರಿಕೆಗಳ ಊರು ಇಂದು ಶಿಕ್ಷಣ ಸಂಸ್ಥೆಗಳ ಮೂಲಕ ಗಮನ ಸೆಳೆಯುತ್ತಿದೆ ಎಂದರು.

ಕೈಗಾರಿಕಾ ಕ್ಷೇತ್ರಕ್ಕೆ ಪರ್ಯಾಯವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಇತ್ತ ತಲೆ ಎತ್ತುತ್ತಾ ಬಂದಿವೆ. ಕೈಗಾರಿಕೆಗಳಿಂದ ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದ ಈ ಊರು ಈಗ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆ, ಕೊಡುಗೆಗಳಿಂದ ಸಾಧನೆ ಮಾಡುತ್ತಿದೆ. ಇಂತಹ ಊರಿನಲ್ಲಿ ಸಾಧಕ ಮಕ್ಕಳನ್ನು ಗುರುತಿಸಿ, ಗೌರವಿಸುವಂತಹ ಕೆಲಸವಾಗುತ್ತಿದೆ ಎಂದರು. 

ದಾವಣಗೆರೆ ಸರ್ಕಾರಿ ಅಂಧ ಮಕ್ಕಳ ಶಾಲೆಯ ಇದೇ ವೇಳೆ ಅಂಧ ವಿದ್ಯಾರ್ಥಿ ಜಿ.ಟಿ.ಕಿರಣ್‍ಗೆ ಸರಸ್ವತಿ ಪುರಸ್ಕಾರ ನೀಡಿ ಗೌರವಿಸಲಾಯಿತು. 

ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಕೆ.ಹೆಚ್. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. 

ಉದ್ಯಮಿ ಎಲೆಬೇತೂರು ಗ್ರಾಮದ ತೇಜಸ್ವಿನಿ ಪ್ರಕಾಶ, ಕಲಾಕುಂಚ ಮಹಿಳಾ ವಿಭಾಗದ ಜ್ಯೋತಿ ಗಣೇಶ ಶೆಣೈ, ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಬೇಳೂರು ಸಂತೋಷ ಕುಮಾರ್ ಶೆಟ್ಟಿ ಸೇರಿದಂತೆ ಇತರರು ಇದ್ದರು.

error: Content is protected !!