ಮಾಲಿನ್ಯ ರಹಿತ ದೀಪಾವಳಿ ಆಚರಣೆಗೆ ಮಾರ್ಗಸೂಚಿ ಬಿಡುಗಡೆ

ದಾವಣಗೆರೆ, ನ.3- ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ದೀಪಾವಳಿ ಹಬ್ಬವನ್ನು ಸರಳ ಹಾಗೂ ಮಾಲಿನ್ಯ ರಹಿತವಾಗಿ ಆಚರಿಸಲು ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಹಬ್ಬದಲ್ಲಿ ಪಟಾಕಿ, ಸಿಡಿಮದ್ದುಗಳನ್ನು ಮಾರಾಟ ಮಾಡುವುದು ಮತ್ತು ಸಿಡಿಸುವ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅವರು ಕೆಲವು ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಸೂಚನೆ ನೀಡಿದ್ದಾರೆ.

ಮಾರ್ಗಸೂಚಿಗಳು : * ಸಂಬಂಧಪಟ್ಟ ಇಲಾಖೆ/ ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡಬಹುದು. * ನ. 1 ರಿಂದ 17 ರವರೆಗೆ ಮಾತ್ರ ಪಟಾಕಿ ಮಾರಾಟ ಮಳಿಗೆ ತೆರೆದಿರಬೇಕು. * ಪರವಾನಗಿಯಲ್ಲಿ ನಿಗದಿಪಡಿಸಿದ ದಿನಾಂಕ, ಸ್ಥಳದಲ್ಲಿ ಮಾತ್ರ ತಾತ್ಕಾಲಿಕವಾಗಿ ಪಟಾಕಿ ಅಂಗಡಿಗಳನ್ನಿಡಬೇಕು. 

* ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಇಲಾಖೆ/ಪ್ರಾಧಿಕಾರವು ಅನುಮತಿಸಬೇಕು. * ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. * ಒಂದು ಮಳಿಗೆಯಿಂದ ಮತ್ತೊಂದು ಮಳಿಗೆಗೆ 6 ಮೀಟರ್‌ ಅಂತರವಿರಬೇಕು. * ಪ್ರತಿ ಮಳಿಗೆಯಲ್ಲಿ ಪರವಾನಗಿ ಪ್ರತಿ ಪ್ರದರ್ಶಿಸಬೇಕು. ಪತ್ರ ಪಡೆದವರು ಕಡ್ಡಾಯವಾಗಿ ಹಾಜರಿರಬೇಕು. 

* ಮಾರಾಟ ಮಳಿಗೆ ಸುತ್ತಮುತ್ತ ನಿತ್ಯ ಸ್ಯಾನಿಟೈಸೇಷನ್ ಮಾಡಬೇಕು. ಸಾರ್ವಜನಿಕರು ಸ್ಯಾನಿಟೈಸರ್‌ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಜೊತೆ 6 ಅಡಿ ಅಂತರ ಗುರುತಿಸಬೇಕು. * ಖರೀದಿಗೆ ಬರುವ ಗ್ರಾಹಕರು, ವರ್ತಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು. ಜನದಟ್ಟಣೆಯಾಗದಂತೆ ನೋಡಿಕೊಳ್ಳಬೇಕು. 

ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ತಮ್ಮ  ಆದೇಶದಲ್ಲಿ ತಿಳಿಸಿದ್ದಾರೆ.

error: Content is protected !!