ಪದವಿ ಪರೀಕ್ಷೆಗೆ ಗೈರಾದವರಿಗೆ ಮತ್ತೊಂದು ಅವಕಾಶಕ್ಕಾಗಿ ಒತ್ತಾಯ

ಕುಲಸಚಿವರಿಗೆ ಎಬಿವಿಪಿ ಮನವಿ ಸಲ್ಲಿಕೆ

ದಾವಣಗೆರೆ, ನ.3- ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಅಂತಿಮ ಪದವಿ ಪರೀಕ್ಷೆಗೆ ಗೈರಾದವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶ ನೀಡುವಂತೆ ಕೋರಿ ವಿ.ವಿ. ಕುಲಪತಿ ಹಾಗೂ ಕುಲಸಚಿವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಪರೀಕ್ಷೆ ವೇಳೆ ಕೊರೊನಾ ಪೀಡಿತರಾಗಿಯೋ ಅಥವಾ ಬಸ್ಸುಗಳ ಕೊರತೆಯಿಂದಾಗಿಯೋ ಪರೀಕ್ಷೆಯಿಂದ ವಂಚಿತರಾಗಿ ಭವಿಷ್ಯದಲ್ಲಿ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಇವರುಗಳಿಗೆ ಮತ್ತೊಮ್ಮೆ ಪರೀಕ್ಷಾ ಅವಕಾಶವನ್ನು ಕಲ್ಪಿಸಿಕೊಟ್ಟಲ್ಲಿ ಅವರ ಭವಿಷ್ಯಕ್ಕೆ ತೊಡಕುಂಟಾಗುವುದಿಲ್ಲ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕೂಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ  ವಂಚಿತರಿಗೆ ಸಪ್ಲಿಮೆಂಟರಿ ಬರೆಯುವವರೊಂದಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿತ್ತು.

ಅದರಂತೆ ದಾವಣಗೆರೆ ವಿವಿ ಕೂಡ ವಂಚಿತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಮನವಿ ಸಲ್ಲಿಸಿತು.  ಮನವಿ ಸ್ವೀಕರಿಸಿದ ಕುಲಪತಿಗಳು ಹಾಗೂ ಕುಲಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಸದ್ಯದಲ್ಲೇ ಪರೀಕ್ಷಾ ವಂಚಿತರಿಗೆ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಪರಿಷತ್ ನಗರಾಧ್ಯಕ್ಷ ಪವನ್ ರೇವಣಕರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜೇಂದ್ರ, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಕೇಶ್, ಚಿತ್ರದುರ್ಗ ಜಿಲ್ಲಾ ಸಂಚಾಲಕ ಸತೀಶ್, ದಾವಣಗೆರೆ ನಗರ ಕಾರ್ಯದರ್ಶಿ ಆಕಾಶ್ ಇಟಗಿ, ಕಾರ್ಯಕರ್ತರಾದ ಜಯಂತ್, ಹರೀಶ್, ಮಧು, ರಂಜಿತ್, ಭಾವನ, ಅಮೃತವರ್ಷಿಣಿ, ಕಿರಣ ಇನ್ನಿತರರಿದ್ದರು.

error: Content is protected !!