ನವದೆಹಲಿ, ಜು. 29 – ರಾಷ್ಟ್ರವ್ಯಾಪಿ ಹೇರಲಾಗಿದ್ದ ಕೊರೊನಾ ಲಾಕ್ಡೌನ್ ಅನ್ನು ಮೂರನೇ ಹಂತದಲ್ಲಿ ತೆರವುಗೊಳಿಸುವ ‘ಅನ್ಲಾಕ್ -3’ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಕಂಟೈನ್ಮೆಂಟ್ ವಲಯದ ಹೊರಗೆ ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಆಗಸ್ಟ್ 1ರಿಂದ ಅನ್ಲಾಕ್ – 3 ಮಾರ್ಗಸೂಚಿಗಳು ಜಾರಿಗೆ ಬರಲಿವೆ. ಆದರೆ, ಶಾಲಾ-ಕಾಲೇಜುಗಳು, ಮೆಟ್ರೋ ರೈಲು, ಸಿನೆಮಾ ಹಾಲ್ಗಳ ಮೇಲಿನ ನಿರ್ಬಂಧಗಳು ಆಗಸ್ಟ್ 31ರವರೆಗೆ ಮುಂದುವರೆಯಲಿವೆ. ರಾಜಕೀಯ ಹಾಗೂ ಧಾರ್ಮಿಕ ಸಮಾವೇಶಗಳ ಮೇಲಿನ ನಿರ್ಬಂಧಗಳನ್ನೂ ಮುಂದುವರೆಸಲಾಗಿದೆ.
ಮಾರ್ಚ್ 25ರಂದು ಕೊರೊನಾ ವೈರಸ್ ಲಾಕ್ಡೌನ್ ಜಾರಿಗೆ ಬಂದ ನಂತರ ಇದೇ ಮೊದಲ ಬಾರಿಗೆ ಸರ್ಕಾರ ಯೋಗ ಸಂಸ್ಥೆಗಳು ಹಾಗೂ ಜಿಮ್ಗಳ ಕಾರ್ಯ ನಿರ್ವಹಣೆಗೆ ಅನುಮತಿ ನೀಡಿದೆ. ಇವುಗಳು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳ ಅನ್ವಯ ಆಗಸ್ಟ್ 5 ರಿಂದ ಕಾರ್ಯ ನಿರ್ವಹಿಸಬಹುದಾಗಿದೆ.
ಇದೇ ವೇಳೆ, ಜನರ ಸಂಚಾರ ನಿರ್ಬಂಧಿಸಿ ರಾತ್ರಿ ವೇಳೆ ಹೇರಲಾಗಿದ್ದ ಕರ್ಫ್ಯೂ ವಾಪಸ್ ಪಡೆಯಲಾಗಿದೆ.
ಸಾಮಾಜಿಕ ಅಂತರ, ಆರೋಗ್ಯ ಕಾಳಜಿಯ ನಿಯಮಗಳು ಹಾಗೂ ಮಾಸ್ಕ್ ಧರಿಸುವುದರೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅವಕಾಶ ನೀಡಲಾಗಿದೆ.
ವಂದೇ ಭಾರತ್ ಅಭಿಯಾನದಡಿ ಅಂತರ ರಾಷ್ಟ್ರೀಯ ವಿಮಾನಯಾನಕ್ಕೆ ಸೀಮಿತ ಅನುಮತಿ ನೀಡಲಾಗಿದೆ. ಹಂತ ಹಂತವಾಗಿ ವಿಮಾನಯಾನವನ್ನು ಮತ್ತಷ್ಟು ಸಡಿಲಿಸಲಾಗುವುದು ಎಂದು ತಿಳಿಸಲಾಗಿದೆ. ಅಂತರ ರಾಜ್ಯ ಹಾಗೂ ರಾಜ್ಯದೊಳಗೆ ವ್ಯಕ್ತಿ ಗಳು ಹಾಗೂ ಸರಕುಗಳ ಸಂಚಾರದ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ. ಇಂತಹ ಚಟುವಟಿಕೆಗಳಿಗೆ ಪ್ರತ್ಯೇಕ ಅನುಮತಿಯ ಅಗತ್ಯವೂ ಇರುವುದಿಲ್ಲ.
ರಾಜ್ಯಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ ನಂತರ ಶಾಲಾ-ಕಾಲೇಜುಗಳು ಹಾಗೂ ಬೋಧನಾ ಸಂಸ್ಥೆಗಳನ್ನು ಆಗಸ್ಟ್ 31 ರವರೆಗೆ ಮುಚ್ಚಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.
ಮೆಟ್ರೋ ರೈಲು ಸೇವೆ, ಸಿನೆಮಾ ಹಾಲ್, ಈಜು ಕೊಳ, ಮನರಂಜನಾ ಪಾರ್ಕ್ಗಳು, ಥಿಯೇಟರ್, ಬಾರ್, ಆಡಿಟೋರಿಯಂ, ಸಭಾಭವನಗಳು ಮತ್ತಿತರೆ ಇದೇ ರೀತಿಯ ಸ್ಥಳಗಳ ಮೇಲಿನ ನಿರ್ಬಂಧ ಮುಂದುವರೆಸಲಾಗಿದೆ.
ಸಾಮಾಜಿಕ, ರಾಜಕೀಯ ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಇತರೆ ದೊಡ್ಡ ಸಮಾವೇಶಗಳ ಮೇಲಿನ ನಿರ್ಬಂಧಗಳನ್ನೂ ಸಹ ಆಗಸ್ಟ್ 31ರವರೆಗೆ ಮುಂದುವರೆಸಲಾಗಿದೆ.
ಕಂಟೈನ್ಮೆಂಟ್ ವಲಯಗಳಲ್ಲಿ ಆಗಸ್ಟ್ 31ರವರೆಗೆ ಕಟ್ಟುನಿಟ್ಟಾಗಿ ಲಾಕ್ಡೌನ್ ಮುಂದುವರೆಸಲು ತಿಳಿಸಲಾಗಿದೆ.
ನಿರ್ಬಂಧಿಸಲಾಗಿರುವ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡುವ ಬಗ್ಗೆ ಪ್ರತ್ಯೇಕವಾಗಿ ಪರಿಸ್ಥಿತಿಯ ಅವಲೋಕನ ನಡೆಸಿದ ನಂತರ ನಿರ್ಧರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.