ನಾಗಮೋಹನ್ ದಾಸ್ ವರದಿ ಜಾರಿಗೆ ಹರಿಹರ ತಾ. ವಾಲ್ಮೀಕಿ ಸಮಾಜ ಮನವಿ

ಹರಿಹರ, ಅ.31- ಪರಿಶಿಷ್ಟ ಪಂಗಡ ದವರಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಪ್ರಮಾಣ ಶೇ. 3 ರಿಂದ ಶೇ 7.5ಕ್ಕೂ ಹೆಚ್ಚಳ ಮಾಡಬೇಕು ಹಾಗೂ ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಆದೇಶ ವನ್ನು ಆದಷ್ಟು ಬೇಗನೇ ಹೊರಡಿಸುವಂತೆ ಆಗ್ರಹಿಸಿ, ತಾಲ್ಲೂಕು ವಾಲ್ಮೀಕಿ ಸಮಾಜದ ವತಿಯಿಂದ ಶಾಸಕ ಎಸ್. ರಾಮಪ್ಪ ಮತ್ತು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರುಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ.ಬಿ. ಮಂಜುನಾಥ್ ಮಾತನಾಡಿ, ನ್ಯಾ. ನಾಗಮೋಹನ್‌ ದಾಸ್ ಏಕ ಸದಸ್ಯ ಆಯೋಗವು ಸಂಘ, ಸಂಸ್ಥೆಗಳ ಅಹವಾಲು ಸ್ವೀಕರಿಸಿ, ಅನೇಕ ಸಭೆಗಳನ್ನು ಮುಕ್ತವಾಗಿ ನಡೆಸಿ ವಿಭಾಗೀಯ ಮಟ್ಟದಲ್ಲಿ ಮನವಿಗಳನ್ನು ಸ್ವೀಕರಿಸಿ, ಒಂದು ವರ್ಷ ಸಮಗ್ರವಾಗಿ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಇದನ್ನು ಅನುಮೋದಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. 

ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ. ಆರ್. ರಂಗಪ್ಪ ಮಾತನಾಡಿ, ಪರಿಶಿಷ್ಟ ಪಂಗಡದ ಮೀಸಲಾತಿ ಯನ್ನು ಶೇ. 3 ರಿಂದ ಶೇ. 7.5 ಕ್ಕೆ ಹೆಚ್ಚು ಮಾಡುವ ಬಗ್ಗೆ ಸುದೀರ್ಘ ಚರ್ಚಿಸಿ ಆಯೋಗದ ವರದಿ ನೀಡಿ 2 ತಿಂಗಳಾದರೂ ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಮಾರುತಿ ಬೇಡರ್, ಮಕ್ರಿ ಪಾಲಾಕ್ಷಪ್ಪ, ರಾಜು ಇಂದ್ರಾನಗರ, ಮಾರುತಿ, ಪರಶುರಾಮ್,
ನಗರಸಭೆ ಸದಸ್ಯ ದಿನೇಶ್ ಬಾಬು, ದೇವೇಂದ್ರಪ್ಪ, ಬಸವರಾಜ್, ಕರಿಬಸಪ್ಪ ಬಾವಿಕಟ್ಟಿ ಹಾಗೂ ಇತರರು ಹಾಜರಿದ್ದರು.

error: Content is protected !!