ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಅಸಮಾಧಾನ
ದಾವಣಗೆರೆ, ಜು.12- ಶಿಷ್ಯ ವೇತನಕ್ಕಾಗಿ ಆಗ್ರಹಿಸಿ, ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರವು ಇಂದಿಗೆ 14 ದಿನಗಳನ್ನು ಪೂರೈಸಿದೆ.
ವಿದ್ಯಾರ್ಥಿಗಳು ಇಂದು ಹಾಸ್ಟೆಲ್ನಲ್ಲಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮತ್ತು ಕಿವಿ ಮುಚ್ಚಿಕೊಂಡು ಪ್ರತಿಭಟಿಸುವ ಮುಖೇನ ಸರ್ಕಾರ ಕುರುಡು ಮತ್ತು ಕಿವುಡುತನ ಪ್ರದರ್ಶಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾನುವಾರದ ಲಾಕ್ಡೌನ್ ಗೆ ಮನ್ನಣೆ ನೀಡಿದ ವಿದ್ಯಾರ್ಥಿಗಳು ನಗರದ ಜಯದೇವ ಮುರುಘ ರಾಜೇಂದ್ರ ವೃತ್ತದಲ್ಲಿ ನಡೆಸಲಾಗುತ್ತಿದ್ದ ಮುಷ್ಕರದ ಸ್ಥಳದಲ್ಲಿ ವೈದ್ಯ ವೃತ್ತಿಯ ಕಳಶಪ್ರಾಯವಾಗಿರುವ ಬಿಳಿ ಕೋಟು ನೇತು ಹಾಕಿ ಮುಷ್ಕರ ಮುಂದುವರೆದಿದೆ ಎಂಬ ಸಂದೇಶ ರವಾನೆ ಮಾಡಿದರು.
ವೈದ್ಯಕೀಯ ವಿದ್ಯಾರ್ಥಿ ಡಾ. ಸುಧಾಕರ್ ಮಾತನಾಡಿ, ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರೊನಾ ವಾರಿಯರ್ಸ್ಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಸರ್ಕಾರ ಹಣ ವ್ಯಯ ಮಾಡಿದೆ.
ಆದರೆ, ಅಲ್ಲಿ ಬಂದಂತಹ ಅನೇಕ ವೈದ್ಯ ವಿದ್ಯಾರ್ಥಿಗಳು ಸಂಬಳವಿಲ್ಲದೇ ಕೆಲಸ ಮಾಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ಹೂವು ಹಾಕುವುದು, ಚಪ್ಪಾಳೆ ಹೊಡೆದರೆ ಹೊಟ್ಟೆ ತುಂಬುವುದಿಲ್ಲ. ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಕಟ್ಟಬೇಕು. ಸಾಲ ಕಟ್ಟಬೇಕು. ಲಕ್ಷ ಲಕ್ಷ ವಿದ್ಯಾರ್ಥಿ
ವೇತನ ಕೊಡುವುದು ಬಾಕಿ ಇದೆ. ಅದನ್ನು ಕೊಡಿ ಎಂಬ ಅಭಿಪ್ರಾಯವಿದೆ. ಇಂತಹ ಕಾರ್ಯಕ್ರಮಗಳು ಯಾರನ್ನು ಖುಷಿಪಡಿಸಲು ? ಎಂದು ಪ್ರಶ್ನಿಸಿದರು.