ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ತಂಡದವರಿಗೆ ಎಸ್ಸೆಸ್ ಪ್ರಶಂಸೆ
ದಾವಣಗೆರೆ, ಮೇ 28- ಕೊರೊನಾ ಸೋಂಕಿತರು ಹಾಗೂ ಕೊರೊನಾ ವಾರಿಯರ್ಸ್ಗೆ ನಿತ್ಯ ಅನ್ನ ದಾಸೋಹ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿರುವ ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ತಂಡದವರ ಕಾರ್ಯ ಶ್ಲ್ಯಾಘನೀಯ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಮುಕ್ತ ಕಂಠದಿಂದ ಪ್ರಶಂಸಿಸಿದರು.
ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪಕ್ಕೆ ಇಂದು ಭೇಟಿ ನೀಡಿ, ಕೊರೊನಾ ಸೋಂಕಿತರು ಹಾಗೂ ಕೊರೊನಾ ವಾರಿಯರ್ಸ್ಗೆ ಅಡುಗೆ ಸಿದ್ದಪಡಿಸುತ್ತಿರುವುದನ್ನು ವೀಕ್ಷಿಸಿ, ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೊರೊನಾ ಸೋಂಕಿತರನ್ನು ಕಂಡರೆ ಮಾರುದ್ದ ಹೋಗಿ ದೂರ ನಿಲ್ಲುವ ಜನರೇ ಹೆಚ್ಚಿರುವ ಇಂತಹ ಪರಿಸ್ಥಿತಿಯಲ್ಲಿ ನಿಸ್ವಾರ್ಥ ಮನೋಭಾವನೆಯಿಂದ ಜನಾರೋಗ್ಯಕ್ಕೆ ಟೊಂಕ ಕಟ್ಟಿ ನಿಂತು ಅನ್ನ ದಾಸೋಹ ಮಾಡುತ್ತಿರುವ ಯುವಕರ ಕಾರ್ಯವನ್ನು ಮೆಚ್ಚಲೇ ಬೇಕು ಎಂದರು.ನಿಮ್ಮ ಈ ಸೇವಾ ಕಾರ್ಯಕ್ಕೆ ನನ್ನಿಂದ ಏನು ಸಹಾಯ ಬೇಕು, ಎಷ್ಟು ಅಕ್ಕಿ ಬೇಕಾದರೂ ಕೊಡುತ್ತೇನೆ. ಸದುಪಯೋಗವಾಗಬೇಕಷ್ಟೇ ಎಂದು ಸಂಘಟಿಕರಿಗೆ ಎಸ್ಸೆಸ್ ಕಿವಿ ಮಾತು ಹೇಳಿದರು.
ಲಾಕ್ಡೌನ್ ಮುಗಿಯುವವರೆಗೂ ಸೇವೆ ನಿರಂತರವಾಗಿರಲಿ ಮತ್ತು ಕೊರೊನಾ ಸೋಂಕಿ ತರಿಗೆ ಗುಣಮಟ್ಟದ (ಉತ್ಕೃಷ್ಟ) ಆಹಾರವನ್ನೇ ಉಣಬಡಿಸಿ ಎಂದು ಅವರು ಸಲಹೆ ನೀಡಿದರು.
ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಅನ್ನ ದಾಸೋಹ ನಡೆಯುತ್ತಿತ್ತು. ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರದ್ದಾಗಿದೆ. ದಾನ ಧರ್ಮ ಮಾಡುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ನಿಮ್ಮ ಸಮಾಜಮುಖಿ ಕೆಲಸಕ್ಕೆ ನಮ್ಮ ಸಹಕಾರ ಇದೆ ಎಂದು ಎಸ್ಸೆಸ್ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತರಳಬಾಳು ಸೇವಾ ಸಮಿತಿ ಗೌರವಾಧ್ಯಕ್ಷ ಶಶಿಧರ್ ಹೆಮ್ಮನಬೇತೂರು, ತರಳಬಾಳು ಜಗದ್ಗುರುಗಳ ಮಾರ್ಗದರ್ಶನದಂತೆ ಸೇವಾ ಕಾರ್ಯ ಆರಂಭವಾಗಿ ಇಂದಿಗೆ 28 ದಿನಗಳಾಗಿದ್ದು, ದಾನಿಗಳ ಸಹಕಾರದೊಂದಿಗೆ ಸುಸೂತ್ರವಾಗಿ ನಡೆಯುತ್ತಿದೆ. ಕೊರೊನಾ ಸೋಂಕಿತರು, ಕೊರೊನಾ ವಾರಿಯರ್ಸ್ ಹಾಗೂ ಪತ್ರಕರ್ತರು ಸೇರಿದಂತೆ ನಿತ್ಯ 1200 ರಿಂದ 1500 ಜನರಿಗೆ ಅನ್ನದಾಸೋಹ ಸೇವೆ ಮಾಡಲಾಗುತ್ತಿದೆ. ಈವರೆಗೆ 1 ಲಕ್ಷ ಚಪಾತಿ, 40 ಸಾವಿರ ಆಹಾರ ಪ್ಯಾಕ್ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್ಸೆಸ್ ಅವರ ಸೂಚನೆಯಂತೆ ಇಂದು 2000 ಹೋಳಿಗೆ ಮಾಡಿಸಿದ್ದಾಗಿ ತಿಳಿಸಿದರು.
25 ಸಾವಿರ ರೂ. ದೇಣಿಗೆ : ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಅವರು, ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಸೇವೆ ನಿರಂತರವಾಗಿರಲಿ ಎಂದು ಹಾರೈಸಿದರು.
ಇದೇ ವೇಳೆ ವೈಯಕ್ತಿಕವಾಗಿ 25 ಸಾವಿರ ರೂ. ದೇಣಿಗೆಯನ್ನು ಸ್ಥಳದಲ್ಲೇ ನೀಡಿದರು. ಪ್ರತಿದಿನ 750 ಕೊರೊನಾ ಸೋಂಕಿತರಿಗೆ ವಿವಿಧ ಬಗೆಯ ತಿಂಡಿ ನೀಡುತ್ತಿರುವುದಾಗಿ ಹೇಳಿದರು.
ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಎಸ್ಸೆಸ್ ಅವರು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಲೇ ಬಂದಿದ್ದು, ದಾನ – ಧರ್ಮದಲ್ಲಿ ಅವರದು ಎತ್ತಿದ ಕೈ ಎಂದರು.
ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್, ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯದ ಪದಾಧಿಕಾರಿಗಳಾದ ಶ್ರೀನಿವಾಸ್ ಮೆಳ್ಳೇಕಟ್ಟೆ, ಲಿಂಗರಾಜ್ ಅಗಸನಕಟ್ಟೆ, ಪ್ರಭು ಕಾವಲಹಳ್ಳಿ, ಮಾಗನೂರು ಉಮೇಶ್ಗೌಡ್ರು, ಧನ್ಯಕುಮಾರ್ ಎಲೇಬೇತೂರು, ಸತೀಶ್ ಸಿರಿಗೆರೆ, ಶಿವಕುಮಾರ್ ಕೊರಟಿಕೆರೆ, ಗಿರೀಶ್ ಗೌಡ್ರು ಕಕ್ಕರಗೊಳ್ಳ, ಹರೀಶ್ ಕೆ.ಎಲ್. ಬಸಾಪುರ ಹಾಗೂ ಮತ್ತಿತರರಿದ್ದರು.