ಮಾಜಿ ಶಾಸಕ ಬಿ.ಪಿ. ಹರೀಶ್ ವಿಶ್ವಾಸ
ಮಲೇಬೆನ್ನೂರು, ಜು.13- ಬಿಜೆಪಿ ಸರ್ಕಾರದ ಸಾಧನೆಗಳು ಮತ್ತು ಕೊರೊನಾ ನಿಯಂತ್ರಣ ಹಾಗೂ ಕೊರೊನಾದಿಂದ ಸಂಕಷ್ಟಕ್ಕೊಳಗಾದವರಿಗೆ ಸರ್ಕಾರ ನೀಡಿದ ನೆರವು ಎಲ್ಲಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದರು.
ದೇವರಬೆಳಕೆರೆ ಗ್ರಾ.ಪಂ. ಸದಸ್ಯರು ಮತ್ತು ಪಿಎಸಿಎಸ್ನ ನಿರ್ದೇಶಕರು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಸಂದರ್ಭದಲ್ಲಿ ಅವರು ಮಾತನಾಡಿದರು.
ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಜನ ಬಿಜೆಪಿ ಬೆಂಬಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹರೀಶ್ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಬರುವ ಜಿ.ಪಂ., ತಾ.ಪಂ. ಚುನಾವಣೆಗೆ ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಬೇಕು. ನಮ್ಮ ಅಭ್ಯರ್ಥಿಗಳಿಗೆ ಸರ್ಕಾರದ ಸಾಧನೆಗಳೇ ಶ್ರೀರಕ್ಷೆ ಆಗಲಿದೆ ಎಂದು ಕರೆ ನೀಡಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಜುಲೈ 24 ರಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಜಿಲ್ಲಾ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ ಅವರುಗಳ ಸಮ್ಮುಖದಲ್ಲಿ ಹಲವರು ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದರು.
ಜಿ.ಪಂ. ಮಾಜಿ ಉಪಾಧ್ಯಕ್ಷ ಟಿ. ಮುಕುಂದ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜು, ಹರಿಹರ ನಗರ ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್, ಬಿಜೆಪಿ ಮುಖಂಡರಾದ ಬಿ.ರಾಮಚಂದ್ರಪ್ಪ, ಹಲಸ ಬಾಳು ಶಿವಾನಂದಪ್ಪ, ತಾ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಆದಾಪುರ ವೀರೇಶ್, ಬೆಳ್ಳೂಡಿ ಬಕ್ಕೇಶ್, ವಕೀಲ ಆನಂದ್, ನಗರಸಭೆ ಸದಸ್ಯರಾದ ರಜನಿಕಾಂತ್, ರಾಘವೇಂದ್ರ ಉಪಾಧ್ಯ ಇನ್ನಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ದೀಟೂರು ಗ್ರಾಮದ ಯುವ ಮುಖಂಡ ನಿರಂಜನ್ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.