ದಾವಣಗೆರೆ, ಏ.21- 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಕಳೆದ 15 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಸಾರಿಗೆ ನೌಕರರು ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಲು ಮುಂದಾಗಿದ್ದಾರೆ. ಸಾರಿಗೆ ಬಸ್ ಗಳು ಸಹ ಸಂಪೂರ್ಣವಾಗಿ ರಸ್ತೆಗಿಳಿಯಲಾರಂಭಿಸಿವೆ.
ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ ಹೈಕೋರ್ಟ್ ಸೂಚನೆಗೆ ತಲೆ ಬಾಗಿರುವ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರದಿಂದ ಸದ್ಯಕ್ಕೆ ದೂರ ಸರಿದು ಕರ್ತವ್ಯದತ್ತ ಹೆಜ್ಜೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿಂದು ಸಾರಿಗೆ ಬಸ್ ಗಳ ಸಂಚಾರ ಹೆಚ್ಚಳವಾಗಿ ರುವುದು ಕಂಡು ಬಂತು.
ಇಂದು ಸುಮಾರು 150 ಸಾರಿಗೆ ಬಸ್ ಗಳು ಆಯಾ ಮಾರ್ಗಗಳಲ್ಲಿ ಸಂಚರಿಸಿವೆ. ಹೈಕೋರ್ಟ್ ಸೂಚನೆ ಮೇರೆಗೆ 300 ಮಂದಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ 1,100 ಮಂದಿ ಸಾರಿಗೆ ನೌಕರರಿದ್ದು, ನಾಳೆಯಿಂದ ಎಲ್ಲಾ ನೌಕರರು ಕರ್ತವ್ಯಕ್ಕೆ ಬರುವ ನಿರೀಕ್ಷೆ ಇದೆ. ಎಲ್ಲಾ ಮಾರ್ಗಗಳಲ್ಲೂ ಬಸ್ ಸಂಚಾರ ಕಾಣಲಿವೆ. ಕರ್ತವ್ಯದ ಬಗ್ಗೆ ಆಸಕ್ತಿ ತೋರಿ ನೌಕರರು ಬಂದಿರುವುದು ಖುಷಿ ತಂದಿದೆ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ಜನತಾವಾಣಿಯೊಂದಿಗೆ ಹರುಷ ವ್ಯಕ್ತಪಡಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರಕ್ಕೆ ಸಾಥ್ ನೀಡಿದ್ದರಿಂದ ಆಯ್ಕೆ ಪಟ್ಟಿಯಿಂದ ತೆಗೆದು ಹಾಕಲಾಗಿದ್ದ 11 ತರಬೇತಿ ಸಿಬ್ಬಂದಿಯನ್ನು ವಾಪಸ್ ಆಯ್ಕೆಪಟ್ಟಿಗೆ ಸೇರಿಸುವಂತಿಲ್ಲ. ಸೇವೆಯಿಂದ ಅಮಾನತ್ತುಗೊಂಡಿರುವ 10 ಮಂದಿ ಸಾರಿಗೆ ನೌಕರರನ್ನು ಪುನಃ ಕರ್ತವ್ಯಕ್ಕೆ ತೆಗೆದುಕೊಳ್ಳುವಂತಿಲ್ಲ. ಬೇರೆಡೆಗೆ ವರ್ಗಾವಣೆ ಮಾಡಲಾಗಿರುವ 66 ಜನ ನೌಕರರು ವರ್ಗಾವಣೆಗೊಂಡಿರುವ ವಿಭಾಗಗಳಲ್ಲೇ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
ಸ್ವ ಸ್ಥಾನಕ್ಕೆ ತೆರಳಿದ ಖಾಸಗಿ ಬಸ್ ಗಳು: ಇಂದು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾದ ಕಾರಣ ಸಾರಿಗೆ ಬಸ್ಗಳ ಸಂಚಾರವೂ ಹೆಚ್ಚಾಗಿದ್ದು, ಪ್ರಯಾಣಿಕರು ಸಾರಿಗೆ ಬಸ್ಗಳತ್ತ ಮುಖ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಗಳ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ ಗಳು ತಮ್ಮ ನಿಲ್ದಾಣದತ್ತ ವಾಪಸ್ಸಾಗಿವೆ ಎಂದು ಹೇಳಲಾಗಿದೆ.