ಅಧ್ಯಾತ್ಮಿಕ ಜ್ಞಾನದಿಂದ ಮಾತ್ರ ಪರಿವರ್ತನೆ ಸಾಧ್ಯ

ಲಯನ್ಸ್  ಪ್ರಾಂತೀಯ ಸಮ್ಮೇಳನ-ಪರಿವರ್ತನೆ ಕಾರ್ಯಕ್ರಮ 

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಧಾರ್ಮಿಕ ವಿಭಾಗದ ಸಂಪರ್ಕಾಧಿಕಾರಿ ರಾಜಯೋಗಿ ಬ್ರಹ್ಮಾಕುಮಾರ ರಾಮನಾಥ್ ಜೀ ಪ್ರತಿಪಾದನೆ

ದಾವಣಗೆರೆ, ಫೆ.20- ಅಧ್ಯಾತ್ಮಿಕ ಜ್ಞಾನದಿಂದಾಗಿ ಮಾತ್ರ ಪರಿವರ್ತನೆ ಸಾಧ್ಯ ಎಂದು ಅಬು ಪರ್ವತದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಧಾರ್ಮಿಕ ವಿಭಾಗದ ಸಂಪರ್ಕಾಧಿಕಾರಿ ರಾಜಯೋಗಿ ಬ್ರಹ್ಮಾಕುಮಾರ ರಾಮನಾಥ್ ಜೀ ಹೇಳಿದರು.

ಅಂತರರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317 ಸಿ, ಪ್ರಾಂತ್ಯ-9ರ ವತಿಯಿಂದ ನಗರದ ದೇವರಾಜ ಅರಸು ಬಡಾವಣೆಯಲ್ಲಿನ ಲಯನ್ಸ್ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರಾಂತೀಯ ಸಮ್ಮೇಳನ-ಪರಿವರ್ತನೆ  2021-22ರ ಕಾರ್ಯಕ್ರಮ ದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಸ್ವ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಸಾಧ್ಯ. ಪರಿವರ್ತನೆ ಹೊಂದಲು ಎಲ್ಲರಿಗೂ ಸ್ವತಂತ್ರವಿದೆ. ಆದರೆ, ಸಮಾಜದಲ್ಲಿ ನಾನು ಅಂದುಕೊಂಡಂತೆಯೇ ನಡೆಯಬೇಕು ಎಂಬ ಮನೋಭಾವ ಜನರಲ್ಲಿ ಹೆಚ್ಚಿದೆ. ವೈದ್ಯರ ಸಲಹೆಯಂತೆ ಔಷಧ ಪಡೆಯದೆ ಹೇಗೆ ಕಾಯಿಲೆಯನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ಸಾಧ್ಯವಿಲ್ಲವೋ ಹಾಗೆಯೇ ಅಧ್ಯಾತ್ಮಿಕ ಜ್ಞಾನವಿಲ್ಲದೇ ನಮ್ಮ ಜೀವನದಲ್ಲಿ ಪರಿವರ್ತನೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ನಾವು ಮಾಡುವ ಪ್ರತಿಯೊಂದು ಕೆಲಸಗಳನ್ನು ಪರಿಪೂರ್ಣತೆಯಿಂದ ಮಾಡಿದಾಗ ಯಶಸ್ಸು ಗಳಿಸಲು ಸಾಧ್ಯ. ಆದರೆ ಇಂದು ನಾವು ಮಾಡುತ್ತಿರುವ ಕೆಲಸ, ಕಾರ್ಯಗಳಲ್ಲಿ ಏಕಾಗ್ರತೆ ಇಲ್ಲವಾಗಿದೆ. ಆದ್ದರಿಂದಲೇ ಅಶಾಂತಿ, ಅಸಮಾಧಾನಗಳು ಹೆಚ್ಚಾಗುತ್ತಿವೆ. ನಮ್ಮ ಕೆಲಸ ಅಥವಾ ವಿದ್ಯಾಭ್ಯಾಸದಲ್ಲಿ ಕುಶಲತೆ, ಪರಿಪೂರ್ಣತೆ ಇದ್ದಾಗ ಯಶಸು ಹಿಂಬಾಲಿಸುತ್ತದೆ ಎಂದರು.

ಕರ್ಮದಲ್ಲಿ ಯಶಸ್ಸು ಪಡೆಯಲು ಧ್ಯಾನ ಸೂಕ್ತ ವಿಧಾನ. ಮನಸ್ಸು ಹಾಗೂ ಬುದ್ಧಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತವೆ. ಅವುಗಳನ್ನು ಜಾಗೃತಗೊಳಿಸಿ ಒಂದು ಗೂಡಿಸುವುದೇ ಏಕಾಗ್ರತೆ. ನಿತ್ಯವೂ ನಮ್ಮೊಂದಿಗೆ ನಾವು ಮಾತನಾಡುವುದರಿಂದ ಇದು ಸಾಧ್ಯ.ಇದು ಕಠಿಣವಾದರೂ ಸತತ ಪರಿಶ್ರಮದಿಂದ ಸಾಧ್ಯವಿದೆ ಎಂದರು.

ಪ್ರತಿ ನಿತ್ಯ ವ್ಯಾಯಾಮ ಮಾಡುವುದರಿಂದ ಹೇಗೆ ದೇಹ ಸದೃಢಗೊಳ್ಳುವುದೋ ಹಾಗೆಯೇ ಮನಸ್ಸನ್ನೂ ಗಟ್ಟಿಗೊಳಿಸುವುದು ಮುಖ್ಯ. ಈ ನಿಟ್ಟಿನಲ್ಲಿ ನಿತ್ಯ ಮುಂಜಾನೆ ನಮ್ಮನ್ನು ನಾವು `ನಾನು ಯಾರು? ನನ್ನ ರೂಪ ಏನು? ದೈವೀ ಗುಣ ಹಾಗೂ ರಾಕ್ಷಸಿ ಗುಣದಲ್ಲಿ ನನ್ನ ಗುಣ ಯಾವುದು?’ ಎಂಬುದು ಪ್ರಶ್ನಿಸಿಕೊಳ್ಳುವ ಅಗತ್ಯವಿದೆ ಎಂದರು.

ಅಧ್ಯಾತ್ಮಿಕ ಜ್ಞಾನವಿದ್ದಾಗ ಮಾತ್ರ ನಿಸ್ವಾರ್ಥ ಸೇವೆ ಮಾಡಲು ಸಾಧ್ಯ. ಇಲ್ಲದಿದ್ದರೆ ಅದು ಹೆಸರಿಗಾಗಿ ಮಾಡುವ ಸೇವೆಯಾಗುತ್ತದೆ. ಎಲ್ಲಿ ನಾನು ಮತ್ತು ನನ್ನದು ಇರುತ್ತದೋ ಅಲ್ಲಿ ದುಃಖ, ಅಶಾಂತಿ ಇದ್ದೇ ಇರುತ್ತದೆ. ನಾವು ಏನನ್ನೂ ತಂದಿಲ್ಲ. ನಾಳೆ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದರೆ ನಾವು ಈ ಶರೀರದಲ್ಲಿದ್ದುಕೊಂಡು ಮಾಡಿದ ಕರ್ಮವನ್ನು ಮಾತ್ರ ತೆಗೆದುಕೊಂಡು ಹೋಗಲು  ಸಾಧ್ಯವಿದೆ. ಅದಕ್ಕಾಗಿ ನಾವು ನಿತ್ಯ ಮಾಡುವ ಕರ್ಮಗಳ ಬಗ್ಗೆ ಎಚ್ಚರ ವಹಿಸುವುದು ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂತ್ಯ-9ರ ಅಧ್ಯಕ್ಷರಾದ ಇ.ಎಂ. ಮಂಜುನಾಥ ಮಾತನಾಡುತ್ತಾ, ದಾನಿಗಳ ಸಹಕಾರದಿಂದ ಬಡ ವಿದ್ಯಾರ್ಥಿಗಳಿಗೆ ಸೈಕಲ್,  ಲ್ಯಾಪ್‌ಟಾಪ್, ಮಹಿಳೆಯರಿಗೆ ಹೊಲಿಗೆ ಯಂತ್ರ, ವೃದ್ಧರಿಗೆ ಸೀರೆ, ಶ್ರವಣ ಸಾಧನ ವಿತರಿಸಲಾಗಿದೆ.  1 ಲಕ್ಷ ನೋಟ್ ಪುಸ್ತಕಗಳನ್ನು ವಿತರಿಸುವುದು ನನ್ನ ಕನಸಾಗಿತ್ತು. ಅದೂ ಈಡೇರಿದೆ ಎಂದು ಹೇಳುತ್ತಾ, ದಾನಿಗಳಿಗೆ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ  ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ತಮ್ಮ ಆಶೀರ್ವಚನದಲ್ಲಿ, ನೀರು ಸದಾ ಹರಿಯದಿದ್ದರೆ ಹೇಗೆ ದುರ್ಗಂಧ ಬೀರುತ್ತದೆಯೋ, ಹಾಗೆಯೇ ಪರಿವರ್ತನೆ ಇಲ್ಲದಿದ್ದರೆ ಜಗತ್ತು ಉತ್ಥಾನದಿಂದ ಪತನದ ಕಡೆ ಸಾಗುತ್ತದೆ ಎಂದರು.

ಭ್ರಷ್ಟಾಚಾರದಿಂದ ಶ್ರೇಷ್ಟಾಚಾರದ ಕಡೆ, ಅಜ್ಞಾನದಿಂದ ಸುಜ್ಞಾನ ಕಡೆ, ದುರ್ಗತಿಯಿಂದ ಸದ್ಘತೆಯ ಕಡೆಗೆ, ದುಃಖದಿಂದ ಸುಖದ ಕಡೆ ಸಾಗುವ ಪರಿವರ್ತನೆ ಇಂದು ಅಗತ್ಯವಿದೆ. ಅದು ಈ ಸಭೆಯಿಂದಲೇ ಆರಂಭವಾಗಲಿ ಎಂದು ಆಶಿಸಿದರು.

ದೇವನಗರಿಯ ಧೀಮಂತ ಬಿರುದಿನೊಂದಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ `ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್, ಸನಾತನ ಧರ್ಮದಲ್ಲಿ ಸೇವೆಗೆ ಮಹತ್ವದ ಸ್ಥಾನವಿದೆ. ಹಿಂದೂ ಧರ್ಮ ಹೊರತುಪಡಿಸಿದರೆ ಬೇರಾವ ಧರ್ಮದಲ್ಲೂ ಸೇವೆಗೆ ಇಷ್ಟೊಂದು ಮಹತ್ವ ನೀಡಿಲ್ಲ ಎಂದರು.

ಯಾವ ಫಲಾಪೇಕ್ಷೆ ಇಲ್ಲದೆ, ಬೇರೆಯವರ ಒಳಿತಿಗಾಗಿ ಮಾಡುವ ಉದಾತ್ತ ಕೆಲವೇ ಸೇವೆ. ಸಾಮಾನ್ಯವಾಗಿ ಲಾಭಕ್ಕಾಗಿ ಕೆಲಸಗಳನ್ನು ಮಾಡುತ್ತೇವೆ. ಆದರೆ ಯಾವುದೇ ಲಾಭ ಇಲ್ಲದೆ ಬೇರೆಯವರಿಗೆ ಉಪಕಾರ ಮಾಡುವುದು ಸೇವೆ ಎಂದರು.

ಕೆಲವರು ಕಣ್ಣಿಗೆ ಕಾಣದಂತೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡರೆ, ಮತ್ತೆ ಕೆಲವರು ಸಂಘ-ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಸೇವೆ ಮಾಡುತ್ತಾರೆ. ಲಯನ್ಸ್ ಕ್ಲಬ್ ಸೇವೆಗಾಗಿಯೇ ಸ್ಥಾಪನೆಯಾದ ಸಂಸ್ಥೆಯಾಗಿದ್ದು, ವಿವಿಧ ವೃತ್ತಿಪರರು ತಮ್ಮ ಬಿಡುವಿನ ವೇಳೆಯಲ್ಲಿ ಸಂಘಟಿತರಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲ್ಯಾಘನೀಯ ಎಂದರು.

ರಾಜಯೋಗಿ ಬ್ರಹ್ಮಾಕುಮಾರ ರಾ ಮನಾಥ್ ಜೀ ಅವರು ಅರ್ಥಗರ್ಭಿತ ಅಧ್ಯಾತ್ಮಿಕ ನುಡಿಗಳನ್ನಾಡಿದ್ದಾರೆ ಎಂದ ವಿಕಾಸ್, ಲಯನ್ಸ್ ಕ್ಲಬ್ ಸೇವೆ ಹಾಗೂ ಇ.ಎಂ. ಮಂಜುನಾಥ ಅವರ ಸೇವಾ ಕಾರ್ಯಗಳು ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.

ದೇವನಗರಿಯ ಧೀಮಂತ ಬಿರುದಿ ನೊಂದಿಗೆ ಸನ್ಮಾನಿತರಾಗಿ ಮಾತನಾಡಿದ ಡಾ. ಬಿ.ಎಸ್. ನಾಗಪ್ರಕಾಶ್, ಲಯನ್ಸ್ ಕ್ಲಬ್‌ಗೆ ಅಡಿಪಾಯ ಹಾಕಿದ ಗಣ್ಯರನ್ನು ನೆನೆಯುತ್ತಾ, ಪ್ರಸ್ತುತ ಕಾರ್ಯಚಟುವಟಿಕೆಗಳನ್ನು ಶ್ಲ್ಯಾಘಿಸಿದರು. ಅಲ್ಲದೇ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ವೈಯಕ್ತಿಕವಾಗಿ 50 ಸಾವಿರ ರೂ.ಗಳ ಧೇಣಿಗೆಯ ಚೆಕ್ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಲಯನ್ಸ್ ವಿಶ್ರಾಂತ ರಾಜ್ಯಪಾಲ ರವಿ ಆರ್.ಹೆಗಡೆ, ನಮ್ಮ ಬದಲಾವಣೆಗಳು ಬೆಳವಣಿಗೆಗೆ  ಪೂರಕವಾಗಿರಬೇಕು ಎಂದರು.

ಶ್ರೀಮತಿ ಶಕುಂತಲ ಮೋಹನ್ ಏಕಬೋಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಲಯನ್ಸ್ ಪ್ರಥಮ ಉಪರಾಜ್ಯಪಾಲ ಎಂ.ಕೆ. ಭಟ್, ಸಮ್ಮೇಳನದ ಕಾರ್ಯದರ್ಶಿ ಬೆಳ್ಳೂಡಿ ಶಿವಕುಮಾರ್, ಖಜಾಂಚಿ ಎನ್.ಸಿ. ಬಸವರಾಜ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಓಂಕಾರಪ್ಪ, ಕಾರ್ಯದರ್ಶಿ ಕೋರಿ ಶಿವಕುಮಾರ್, ಖಜಾಂಚಿ ಕಣವಿ ನಟರಾಜ್, ಸಹ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ್, ವಲಯ ಅಧ್ಯಕ್ಷರುಗಳಾದ ಎಸ್. ವೆಂಕಟಾಚಲಂ, ಡಾ.ಜಿ.ಎನ್. ಹೆಚ್. ಕುಮಾರ್, ಎಂ.ಬಿ. ಶಿವಕುಮಾರ್, ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲರುಗಳಾದ ಡಾ.ಟಿ.ಬಸವರಾಜ್, ಹೆಚ್.ಎನ್. ಶಿವಕುಮಾರ್, ಎ.ಆರ್. ಉಜ್ಜಿನಪ್ಪ ಇತರರು ಉಪಸ್ಥಿತರಿದ್ದರು. ಹೆಚ್.ವಿ. ಮಂಜುನಾಥ ಸ್ವಾಮಿ ಅವರು ಪ್ರಾಂತೀಯ ಅಧ್ಯಕ್ಷರನ್ನು ಪ್ರಾಂತೀಯ ಅಧ್ಯಕ್ಷ ಮಂಜುನಾಥ ಅವರ ಪರಿಚಯಿಸಿಕೊಟ್ಟರು. 

ಜಾನಪದ ಅಕಾಡೆಮಿ ಸದಸ್ಯರಾದ ಶ್ರೀಮತಿ ರುದ್ರಾಕ್ಷಿಬಾಯಿ ಪ್ರಾರ್ಥಿಸಿದರು. ಎನ್.ವಿ. ಬಂಡಿವಾದ ಧ್ವಜ ವಂದನೆ ನೆರವೇರಿಸಿದರು. ಸಮ್ಮೇಳನ ಸಮಿತಿ ಅಧ್ಯಕ್ಷ ಅಜ್ಜಂಪುರ ಶೆಟ್ರು ಮೃತ್ಯುಂಜಯ ಅತಿಥಿಗಳನ್ನು ಸ್ವಾಗತಿಸಿದರು. ಲಯನ್ಸ್ ಚೇರ್ಮನ್‌ ಸುರಭಿ ಎಸ್. ಶಿವಮೂರ್ತಿ ಕಾರ್ಯಕ್ರಮ ನಿರೂಪಿಸಿದರು. 

error: Content is protected !!