ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದ ದೇವನಗರಿ

ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದ ದೇವನಗರಿ

ಶಿವನಿಗೆ ವಿಶೇಷ ಪೂಜೆ, ಅಲಂಕಾರ, ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದ ಭಕ್ತರು

ದಾವಣಗೆರೆ, ಫೆ.26- ಶಿವನಾಮ ಸ್ಮರಣೆಯ ಮಹಾಶಿವರಾತ್ರಿ ಹಬ್ಬವನ್ನು ಗುರುವಾರ ನಗರದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. 

ಭಕ್ತರು ಬೆಳಿಗ್ಗೆಯಿಂದ ರಾತ್ರಿವರೆಗೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ರಾತ್ರಿ ಶಿವನಾಮ ಸ್ಮರಿಸುತ್ತಾ ಜಾಗರಣೆ ಮಾಡಿ ಭಕ್ತಿ ಮೆರೆದರು. ಓಂ ನಮಃ ಶಿವಾಯ ಎಲ್ಲೆಡೆ ಅನುರುಣಿಸುತ್ತಿತ್ತು.

ನಗರದ ಎಲ್ಲಾ ದೇವಸ್ಥಾನಗಳಲ್ಲಿ ಶಿವರಾತ್ರಿಯ ವಿಶೇಷ ಪೂಜೆ ಜರುಗಿತು. ದೇವರ ಮೂರ್ತಿ ಹಾಗೂ ಶಿವಲಿಂಗಕ್ಕೆ ಅಭಿಷೇಕ ಮಾಡಲಾಯಿತು. ಭಕ್ತರು ಬಿಲ್ವಪತ್ರೆಯನ್ನು ಈಶ್ವರ ಲಿಂಗಕ್ಕೆ ಅರ್ಪಿಸಿ, ಜಲಾಭಿಷೇಕ ಮಾಡಿದರು. ಹಬ್ಬದ ನಿಮಿತ್ತ ಮೂರ್ತಿಗಳಿಗೆ ಮಾಡಿದ ವಿಶೇಷ ಅಲಂಕಾರ ಗಮನ ಸೆಳೆಯಿತು.

ಭಕ್ತರು ದೇವಸ್ಥಾನಗಳಿಗೆ ಕುಟುಂಬದೊಂದಿಗೆ ತೆರಳಿ, ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಶಿವನ ಸ್ಮರಿಸುವ ಭಕ್ತಿಗೀತೆಗಳು, ಭಜನೆಗಳು ಹಾಗೂ ಹಾಡುಗಳು ಎಲ್ಲೆಡೆ ಕೇಳಿ ಬರುದ್ದವು. ಕೆಲ ದೇವಸ್ಥಾನದ ಆಡಳಿತ ಮಂಡಳಿಗಳು ಭಕ್ತರಿಗೆ ಪ್ರಸಾದ ವ್ಯವಸ್ಥೆ ಕೂಡ ಮಾಡಿದ್ದರು. ಸಂಜೆ ಭಕ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಗೀತಾಂಜಲಿ ಚಿತ್ರಮಂದಿರದ ಪಕ್ಕದಲ್ಲಿನ ಶ್ರೀ ಲಿಂಗೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ನಡೆಯಿತು. ಶಿವ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಸರದಿ ಸಾಲಿನಲ್ಲಿ ನಿಲ್ಲಲು ಶಾಮಿಯಾನದ ವ್ಯವಸ್ಥೆ ಮಾಡಲಾಗಿತ್ತು. ತಡರಾತ್ರಿ ವರೆಗೂ ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರು. 

ಕೆಟಿಜೆ ನಗರದ 10ನೇ ಕ್ರಾಸ್‌ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ವಿಶೇಷ ಪೂಜೆ ನಡೆದವು. ಕನ್ನಿಕಾಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿರುವ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಸಂಜೆ ಮಹಾಪೂಜೆ, ಜಾಗರಣೆ, ಪಳಾರದ ವ್ಯವಸ್ಥೆ ನಂತರ ಮನರಂಜನಾ ಕಾರ್ಯಕ್ರಮಗಳು ನಡೆದವು.

ಅಥಣಿ ಕಾಲೇಜು ಆವರಣದಲ್ಲಿ ಎತ್ತರದ ಶಿವ ಮೂರ್ತಿ ಮುಂಭಾಗ ಶಿವಭಕ್ತಿ ಬಿಂಬಿಸುವ ಕಲಾ ಪ್ರದರ್ಶನಗಳು ನಡೆದವು. ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಶಿವ ಧ್ಯಾನ ಮಂದಿರದಲ್ಲಿ ಶಿವರಾತ್ರಿ ಅಂಗವಾಗಿ ಬಾಪೂಜಿ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಸಂಜೆ  ಖ್ಯಾತ ಗಾಯಕಿ ಅರ್ಚನ ಉಡುಪ ಅವರಿಂದ ಭಕ್ತಿ ಮಂಜರಿ ಕಾರ್ಯಕ್ರಮ ನಡೆಯಿತು.  ಸರದಿಯಲ್ಲಿ ಶಿವನ ದರ್ಶನ  ಪಡೆದ ಭಕ್ತರು, ಅರ್ಚನಾ ಅವರ ಹಾಡುಗಳಿಗೆ ತಲೆ ದೂಗಿದರು.

ಜಯದೇವ ವೃತ್ತದಲ್ಲಿನ ಕೂಡಲಿ ಶಂಕರ ಮಠದಲ್ಲಿ ಅಖಂಡ ರುದ್ರಾಭಿಷೇಕ ನಡೆಯಿತು. ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನ ಬಳಿಯ ಈಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು. ರಾತ್ರಿ ಜಾಗರಣೆ, ಭಜನೆ ಕಾರ್ಯಕ್ರಮ ನಡೆಯಿತು. ವಿನೋಬನಗರ ದಲ್ಲಿನ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ನಡೆಯಿತು. ವಿದ್ಯಾನಗ ರದ ಈಶ್ವರ, ಪಾರ್ವತಿ ಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಡೆಯಿತು.

ಹಳೇಪೇಟೆಯ ಪಾತಾಳ ಲಿಂಗೇಶ್ವರ ದೇವಳದಲ್ಲಿ ವಿಶೇಷ ಪೂಜೆ ನಡೆಯಿತು. ನಗರದ ನೀಲಕಂಠೇಶ್ವರ ದೇವಸ್ಥಾನ ಸೇರಿದಂತೆ  ಎಂಸಿಸಿ ಎ, ಬಿ ಬ್ಲಾಕ್‌, ನಿಜಲಿಂಗಪ್ಪ ಬಡಾವಣೆ, ವಿದ್ಯಾನಗರ, ಹಳೇಪೇಟೆ ಸೇರಿದಂತೆ ಅನೇಕ ಕಡೆ ಇರುವ ಶಿವ ದೇವಾಲಯಗಳಲ್ಲಿ ಶಿವಪೂಜೆ ಮತ್ತು ಜಾಗರಣೆ, ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

error: Content is protected !!