ಪಾದಯಾತ್ರೆಯಿಂದ ದೇಹ, ಭಾವ, ಅಂತರಂಗ ಶುದ್ಧಿ: ಪುಣ್ಯಕೋಟಿ ಶ್ರೀ

ಪಾದಯಾತ್ರೆಯಿಂದ ದೇಹ, ಭಾವ, ಅಂತರಂಗ ಶುದ್ಧಿ: ಪುಣ್ಯಕೋಟಿ ಶ್ರೀ

ದಾವಣಗೆರೆ, ಫೆ. 26- ಪಾದಯಾತ್ರೆ ಮಾಡುವುದರಿಂದ ದೇಹ, ಭಾವ, ಅಂತರಂಗ ಶುದ್ಧಿ ಜೊತೆಗೆ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಎಂದು ಕೋಡಿಯಾಲ ಹೊಸಪೇಟೆಯ ಅವಿಮುಕ್ತ ತಪೋಕ್ಷೇತ್ರ ಪುಣ್ಯಕೋಟಿ ಮಠದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಹೇಳಿದರು.

ನಗರದ ಚೌಕಿಪೇಟೆಯಲ್ಲಿನ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಕುರುವತ್ತಿ ಬಸವೇಶ್ವರ ಪಾದಯಾತ್ರೆ ಸೇವಾ ಸಮಿತಿ ವತಿಯಿಂದ ಕುರುವತ್ತಿ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಶ್ರೀ ಬಸವೇಶ್ವರಸ್ವಾಮಿ ರಥೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ 21 ನೇ ವರ್ಷದ ಪಾದಯಾತ್ರೆ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕೇವಲ ಪಾದಯಾತ್ರೆಯಲ್ಲಿ ಕಲ್ಲು, ಮುಳ್ಳು, ಕಷ್ಟ, ಸಂಕಷ್ಟಗಳು ಬರುತ್ತವೆ ಎಂದು ತಿಳಿಯದೇ ಬದುಕಿನುದ್ದಕ್ಕೂ ಕಷ್ಟ, ಸಂಕಷ್ಟಗಳು ಇದ್ದೇ ಇರುತ್ತವೆ. ಅವುಗಳನ್ನೆಲ್ಲಾ ಮೆಟ್ಟಿ ನಿಂತು ಮುನ್ನಡೆದಾಗ ಜೀವನದ ಹಾದಿ ಸುಗಮವಾಗಲು ಸಾಧ್ಯ ಎಂದರು.

ಬಸವೇಶ್ವರನ ನಾಮಸ್ಮರಣೆಯೊಂದಿಗೆ ನಮ್ಮ ಬದುಕಿನುದ್ದಕ್ಕೂ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಾ ಪಾದಯಾತ್ರೆ ಮಾಡುತ್ತೇವೆ. ಬದುಕು ಶಾಶ್ವತ ಅಲ್ಲ. ನಾವು ಮಾಡುವ ಪುಣ್ಯ ಕಾರ್ಯಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯನ್ನು ಉಳಿಸು ವಂತಹ ಇಂತಹ ಅನೇಕ ಪಾದಯಾತ್ರೆಗಳು ನಾಡಿನಾದ್ಯಂತ ಜರುಗುತ್ತಿವೆ. ಪಾದಯಾತ್ರೆ ಕಾರ್ಯ ಅತ್ಯಂತ ಶ್ರೇಷ್ಠವಾದುದು. ನಾವು ನಮ್ಮ ಮಠಕ್ಕೆ ಪುಣ್ಯಕೋಟಿ ಎಂದು ಹೆಸರಿಟ್ಟಿದ್ದೇವೆ. ಪುಣ್ಯಕೋಟಿ ಎಂದರೆ ಸತ್ಯ ಮತ್ತು ಪ್ರಾಮಾಣಿಕತೆ ಎಂದರ್ಥ. ಎಲ್ಲಿಯ ವರೆಗೆ ಸತ್ಯವನ್ನು ಹೇಳುವುದಿಲ್ಲವೋ ಅಲ್ಲಿಯವರೆಗೆ ನಾವು ಸತ್ಪುರುಷರಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಯಾರು ನಮ್ಮ ಬದುಕಿಗೆ, ವ್ಯವಸ್ಥೆಗೆ ಸಹಕಾರ ನೀಡುವವರು, ಕಷ್ಟದಲ್ಲಿ ನೆರವಾಗುವವರೇ ಭಗವಂತನ ಸ್ವರೂಪ ಎಂದು ತಿಳಿಯಬೇಕಾಗಿದೆ ಎಂದರು.

ಅಭಿ ಕಾಟನ್ ಮಾಲೀಕ ಎನ್.ಬಕ್ಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾವಣಗೆರೆ-ಹರಿಹರ ನಗರಾ ಭಿವೃದ್ಧಿ  ಪ್ರಾಧಿಕಾರದ ಸದಸ್ಯೆ ವಾಣಿ ಬಕ್ಕೇಶ್, ಮಹಾ ನಗರ ಪಾಲಿಕೆ ಮಾಜಿ ಉಪಮೇಯರ್ ಸೋಗಿ ಶಾಂತಕುಮಾರ್, ಮಾಗಿ ಜಯಪ್ರಕಾಶ್ ಮಾತನಾಡಿದರು.

ಶ್ರೀ ಬಸವೇಶ್ವರ ಲಾರಿ ಟ್ರಾನ್ಸ್‌ಪೋರ್ಟ್ ಕಂಪನಿ ಮಾಲೀಕ ಮಹಾಂತೇಶ್ ವಿ.ಒಣರೊಟ್ಟಿ, ಶ್ರೀ ಕುರುವತ್ತಿ ಬಸವೇಶ್ವರ ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ಕೆ.ವಿ. ಸತ್ಯನಾರಾಯಣ, ಕೆ.ಎಂ. ಲೋಕೇಶ್ವರಯ್ಯ ಕೊಂಡಜ್ಜಿಮಠ, ಹೆಚ್.ಚನ್ನಬಸಪ್ಪ, ಬಾದಾಮಿ ಜಯಣ್ಣ, ಶಿವಾನಂದ ಬೆನ್ನೂರು, ಶಿವಕುಮಾರ್, ಬಸವರಾಜ್, ಗಿರೀಶ್, ಚಂದ್ರಯ್ಯ ಸೇರಿದಂತೆ  ಮತ್ತಿತರರು ಭಾಗವಹಿಸಿದ್ದರು. 

ದಾವಣಗೆರೆ ನಗರ ಸೇರಿ ಸುತ್ತಮುತ್ತಲಿನ ಹಳ್ಳಿಗಳ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆ ನಗರದ ವೀರಮದಕರಿ ವೃತ್ತದಿಂದ ಯರಗುಂಟೆ, ಆವರಗೊಳ್ಳ, ಕಕ್ಕರಗೊಳ್ಳ, ಕೊಂಡಜ್ಜಿ, ಬುಳ್ಳಾಪುರ, ಕುರುಬರಹಳ್ಳಿ ಕ್ರಾಸ್, ದುಗ್ಗಾವತಿ, ವಟ್ಲಳ್ಳಿ, ಕಡತಿ, ನಂದ್ಯಾಲ, ನಿಟ್ಟೂರು ಕ್ರಾಸ್, ಹಲುವಾಗಲು, ಗರ್ಭಗುಡಿ, ಸಿದ್ಧಾಪುರ, ಲಿಂಗನಾಯ್ಕನಹಳ್ಳಿ ಮಾರ್ಗವಾಗಿ ಕುರುವತ್ತಿ ತಲುಪಲಿದೆ. 

error: Content is protected !!