ಮಲೇಬೆನ್ನೂರು : ಶಿವರಾತ್ರಿ ಆಚರಣೆ

ಮಲೇಬೆನ್ನೂರು : ಶಿವರಾತ್ರಿ ಆಚರಣೆ

ಯಲವಟ್ಟಿ ಮಠದಲ್ಲಿ ವಿಶೇಷ ಪೂಜೆ, ಜಿಗಳಿ ಕ್ಯಾಂಪಿನಲ್ಲಿ ಅನ್ನ ಸಂತರ್ಪಣೆ ಮಲೇಬೆನ್ನೂರು, ಫೆ. 26- ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು.
ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಶಿವಲಿಂಗ ಪೂಜೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.
ಪ್ರಯಾಗ್‌ರಾಜ್‌ನಲ್ಲಿ ತ್ರಿವೇಣಿ ಸಂಗಮದಿಂದ ಪವಿತ್ರ ಜಲದಿಂದ ಅಭಿಷೇಕ, ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಬೆನಕಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಈ ಪೂಜಾ ಕಾರ್ಯಕ್ರಮಗಳು ನಡೆದವು. ಶಿವರಾತ್ರಿ ಅಂಗವಾಗಿ ಭಕ್ತರಿಗೆ ಪ್ರಸಾದವಾಗಿ ಹಣ್ಣು, ಉಪ್ಪಿಟ್ಟು ನೀಡಲಾಯಿತು. ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ದ್ವಾದಶ ಜೋತಿರ್ಲಿಂಗಗಳ ದರ್ಶನದ ಏರ್ಪಾಡಾಗಿತ್ತು. ಪಟ್ಟಣದ ಶ್ರೀ ಕಲ್ಲೇಶ್ವರ ದೇವಸ್ಥಾನ ಮತ್ತು ಬಸವೇಶ್ವರ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಯಲವಟ್ಟಿಯ ಶ್ರೀ ಗುರು ಸಿದ್ಧಾಶ್ರಮದಲ್ಲಿ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮಗಳನ್ನು ಶ್ರೀ ಯೋಗಾನಂದ ಸ್ವಾಮೀಜಿ ಭಕ್ತರ ಸಮ್ಮುಖದಲ್ಲಿ ನಡೆಸಿಕೊಟ್ಟರು. ಶಿವಭಜನೆ ಹಾಗೂ ಮಹಾ ಮಂಗಳಾರತಿ ಬಳಿಕ ಭಕ್ತರಿಗೆ ಹಣ್ಣು, ಕೇಸರಿಬಾತ್, ಉಪ್ಪಿಟ್ಟನ್ನು ಪ್ರಸಾದವಾಗಿ ವಿತರಿಸಲಾಯಿತು.
ವಿನಾಯಕ ನಗರ (ಜಿಗಳಿ ಕ್ಯಾಂಪ್) ಕ್ಯಾಂಪಿನಲ್ಲಿರುವ ಶ್ರೀ ಗುಂಡಪ್ಪಯ್ಯ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಅಭಿಷೇಕ ಪೂಜೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕುಂಬಳೂರು ಗ್ರಾಮದಲ್ಲಿರುವ ದೇವಸ್ಥಾನದಲ್ಲೂ ವಿಶೇಷ ಪೂಜೆಗಳು ನಡೆದವು. ಜಿಗಳಿ ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನ ಮತ್ತು ಸಿಬಾರ ಕಟ್ಟೆ ಹಾಗೂ ಮಹೇಶ್ವರ ದೇವಸ್ಥಾನಗಳಲ್ಲಿ ಬುಧವಾರ ರಾತ್ರಿ ಜಾಗರಣೆ ಭಜನೆ ನಡೆಯಿತು. ಗುರುವಾರ ಮೂರು ಕಡೆಗಳಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

error: Content is protected !!