ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಸರ್ಕಾರಿ ಶಾಲೆಗಳು

ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಸರ್ಕಾರಿ ಶಾಲೆಗಳು

ವಿಜ್ಞಾನ ವಸ್ತು ಪ್ರದರ್ಶನ, ಬೀಳ್ಕೊಡುಗೆ ಸಮಾರಂಭದಲ್ಲಿ ಡಾ.ಎ.ಬಿ. ರಾಮಚಂದ್ರಪ್ಪ ಅಭಿಮತ

ಚನ್ನಗಿರಿ, ಫೆ.26- ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಹೆಣಗಾಡುತ್ತಿವೆ ಎಂದು ಹಿರಿಯ ಸಾಹಿತಿ ಡಾ.ಎ.ಬಿ. ರಾಮಚಂದ್ರಪ್ಪ ತಿಳಿಸಿದರು.

ಸಮೀಪದ ಆಗರಬನ್ನಿಹಟ್ಟಿ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದ `ವಿಜ್ಞಾನ ವಸ್ತು ಪ್ರದರ್ಶನ’ ಮತ್ತು 7ನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಯ ಪೈಪೋಟಿಯೊಂದಿಗೆ ಸ್ಫರ್ಧೆಗಿಳಿದು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಆದರೂ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದ್ದರಿಂದ ಎಷ್ಟೋ ಶಾಲೆಗಳು ಮುಚ್ಚಲ್ಪಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಗುಣಮಟ್ಟದ ಶಿಕ್ಷಣ, ಶಿಸ್ತಿನ ಪಾಠ ಹಾಗೂ ಯಶಸ್ಸಿನ ಗುರಿ ತೋರಿಸುವ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿದ್ದರೆ ನಿಜಕ್ಕೂ ಸರ್ಕಾರಿ ಶಾಲೆಗಳು ಸಮೃದ್ಧಿಯಾಗುತ್ತವೆ ಮತ್ತು ಖಾಸಗಿ ಶಾಲೆಗಳನ್ನು ಮೀರಿಸುತ್ತವೆ ಎಂದು ಹೇಳಿದರು.

ಆಗರಬನ್ನಿಹಟ್ಟಿಯ ಸರ್ಕಾರಿ ಶಾಲೆ ಉತ್ತಮ ಶಿಕ್ಷಕರನ್ನು ಹೊಂದಿದೆ. ಇಲ್ಲಿನ ಶಿಕ್ಷಕರು, ಎಸ್‌ಡಿಎಂಸಿ ಕಮಿಟಿ ಹಾಗೂ ಗ್ರಾಮಸ್ಥರ ಪರಿಶ್ರಮದಿಂದ ಚನ್ನಗಿರಿಯ ಮಕ್ಕಳು ಇಲ್ಲಿ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು.

ಸಾಹಿತಿ ಕೆ. ಸಿರಾಜ್‌ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಹಾಗೂ ಆಧುನಿಕ ಜೀವನ ಪ್ರೀತಿಸುವ ಓಟದಲ್ಲಿ ಸಂಸ್ಕೃತಿ, ಸಾಮಾಜಿಕ ಚಿಂತನೆ, ಮಾನವೀಯ ಮೌಲ್ಯಗಳ ಸಂಬಂಧಗಳನ್ನು ಮರೆತು ಬಿಟ್ಟಿದ್ದೇವೆ ಎಂದು ಎಚ್ಚರಿಸಿದರು.

ವಿಜ್ಞಾನ ಓಟದ ಭರಾಟೆಯಲ್ಲಿ ಮನೆಯಲ್ಲಿರುವ ಹಿರಿಯರನ್ನು, ಮನೆಯ ಅಕ್ಕಪಕ್ಕದವರನ್ನು, ನಿಶಕ್ತರನ್ನು ನಾವಿಂದು ಕಡೆಗಣಿಸುತ್ತಿದ್ದೇವೆ. ಹಾಗಾಗಿ ಇಂದಿನ ಮಕ್ಕಳಲ್ಲಿ ಧನಾತ್ಮಕ ಶಿಕ್ಷಣವನ್ನು ಪೂರೈಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಬಹುದೊಡ್ಡ ಜವಾಬ್ದಾರಿ ಆಗಿದೆ ಎಂದು ಹೇಳಿದರು.

ನಿವೃತ್ತ ಇಂಜಿನಿಯರ್‌ ಅಬ್ದುಲ್ ರಹೀಂ ಮಾತನಾಡಿ, ಇಂದಿನ ಮಕ್ಕಳು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು. ಪ್ರಾಥಮಿಕ ಹಂತದಿಂದಲೇ ಅವರಿಗೆ ವಿಜ್ಞಾನ ಪ್ರಯೋಗಾಲಯದ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಈ ವೇಳೆ ಶಿಕ್ಷಣ ಕ್ಷೇತ್ರದ ಸಮನ್ವಯಾಧಿಕಾರಿ ಡಾ.ಎಸ್. ಶಂಕ್ರಪ್ಪ, ಬಿ.ಕೆ. ರಾಜಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮೆಹಬೂಬ್ ಖಾನ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸದಸ್ಯರಾದ ಶಾಕೀರ್ ಉಲ್ಲಾ ಷರೀಫ್, ನಾಗರಾಜ್, ರಾಮಪ್ಪ, ನಲ್ಲೂರು ಸೈಫುಲ್ಲಾ ಸಾಬ್, ಷಂಷೀರ್ ಖಾನ್, ಅಶ್ಫಾಕ್, ಜಾಬೀರ್, ಮುಹೀ ಬುಲ್ಲಾ ಹಾಗೂ ಶಾಲಾ ಮಕ್ಕಳ ಪೋಷಕರು, ಗ್ರಾಮಸ್ಥರು ಹಾಜರಿದ್ದರು.

error: Content is protected !!