ನಗರದಲ್ಲಿ ಇಂದು ಸೈಕಲ್ ವಿತರಣೆ

ನಗರದಲ್ಲಿ ಇಂದು ಸೈಕಲ್ ವಿತರಣೆ

`ಮಹಲಿಂಗರಂಗ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಸಾಹಿತಿ ಕುಂ.ವೀ. ಕರೆ

ದಾವಣಗೆರೆ, ನ.28- ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆಯಲ್ಲಿ ನಡೆಸಲು ಒತ್ತಾಯಿಸಿ, ಇಲ್ಲಿನ ಜನತೆ  ಚಳವಳಿ ನಡೆಸಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ ಕರೆ ನೀಡಿದರು.

ನಗರದ ಕುವೆಂಪು ಕನ್ನಡದಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಮತಿ ಗೌರಮ್ಮ ಪಿ.ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್ ಸ್ಥಾಪಿತ 2024ನೇ ಸಾಲಿನ `ಮಹಲಿಂಗ ರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ’, ಗ್ರಾಮೀಣ ಸಿರಿ ಮತ್ತು ನಗರ ಸಿರಿ ಪ್ರಶಸ್ತಿ ಪ್ರದಾನ ಹಾಗೂ ಸಂಗಮ ಸಿರಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ದಾವಣಗೆರೆ ಕರ್ನಾಟಕದ ಹೃದಯ ಭಾಗ. ಸಾಂಸ್ಕೃತಿಕ ನಗರಿ. ಇಲ್ಲಿ ಕಳೆದ ಹತ್ತು ವರ್ಷಗಳ ಹಿಂದೆಯೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕಿತ್ತು. ಆದರೆ ಈ ವಿಚಾರದಲ್ಲಿ ಹಿಂದಿನ ಸರ್ಕಾರ ದೊಡ್ಡ ತಪ್ಪು ಮಾಡಿದೆ. ಸರ್ಕಾರದ ಅಳಿವು-ಉಳಿವು ಕೈಯಲ್ಲಿಟ್ಟುಕೊಂಡಿರುವ ರಾಜಕಾರಣಿ ಗಳು ದಾವಣಗೆರೆಯಲ್ಲಿದ್ದಾರೆ. ಜನರು ಅವರ ಬಳಿ ವಿಶ್ವ ಸಮ್ಮೇಳನ ನಡೆಸುವಂತೆ ಕೇಳಬೇಕಿದೆ ಎಂದರು.

ಕನ್ನಡದಷ್ಟು ಸುಂದರವಾದ ಭಾಷೆ ವಿಶ್ವದಲ್ಲಿ ಬೇರೆಲ್ಲೂ ಇಲ್ಲ. ಕನ್ನಡ ಮರೆತರೆ ತಾಯಿಯನ್ನು ಮರೆತಂತೆ. ಹೀಗಾಗಿ ಪ್ರತಿಯೊಬ್ಬರೂ ಕನ್ನಡದ ಲ್ಲಿಯೇ ಮಾತನಾಡಬೇಕು. ಕನ್ನಡದಲ್ಲಿಯೇ ಅಳಬೇಕು, ನಗಬೇಕು, ಜಗಳವಾಡಬೇಕು. 56 ಸಂಬಂಧ ವಾಚಕಗಳನ್ನು ಕನ್ನಡದಲ್ಲಿವೆ. ಆಂಟಿ, ಅಂಕಲ್ ಬದಲು ಮಕ್ಕಳಿಗೆ ಸಂಬಂಧವಾಚಕ ಗಳನ್ನು ತಿಳಿಸಿಕೊಡಿ ಎಂದು ಸಲಹೆ ನೀಡಿದರು.

ಸಂಸ್ಕೃತದಿಂದ ಮಾತ್ರ ದೇವರನ್ನು ಒಳಿಸಿಕೊಂಡು ಮೋಕ್ಷ ಪಡೆಯಬಹುದು ಎಂಬ ಮಾತನ್ನು 350 ವರ್ಷಗಳ ಹಿಂದೆಯೇ ಧಿಕ್ಕರಿಸಿ ಕನ್ನಡ ಸುಲಿದ ಬಾಳೇ ಹಣ್ಣಿನಷ್ಟು ಸುಲಭವಾದ ಭಾಷೆ ಎಂದು ಕವಿ ಮಹಲಿಂಗ ರಂಗ ಅವರು ಕ್ರಾಂತಿ ಮಾಡಿದ್ದರು. ಹೀಗಾಗಿ ದಾವಣಗೆರೆ `ಜಾಗೃತ ಸ್ಥಳ’ ಎಂದವರು ಹೇಳಿದರು.

ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ, ಹವ್ಯಾಸಿ ರಂಗಭೂಮಿ ಹಾಗೂ ವೃತ್ತಿ ರಂಗಭೂಮಿ ಎರಡರಲ್ಲೂ ಪರಿಣಿತಿ ಪಡೆದವರು ಮಲ್ಲಿಕಾರ್ಜುನ ಕಡಕೋಳ. ಅವರ ಬರಹಗಳಲ್ಲಿ ನೆಲ ಭಾಷೆಯ ಮಿಡಿತವನ್ನು ಕಾಣಬಹುದಾಗಿದೆ ಎಂದರು.

ಕಥೆಗಾರನಾಗಿ, ಅಂಕಣಕಾರನಾಗಿ ಗುರುತಿಸಿ ಕೊಂಡಿರುವ ಕಡಕೋಳ, ವೃತ್ತಿ ರಂಗಭೂಮಿಯ ಅನೇಕ ಮಹನೀಯರ  ನೋವು-ನಲಿವುಗಳನ್ನು ಅಧ್ಯಯನ ಮಾಡಿ ಅವರ ಬಗ್ಗೆ ಬರೆದಿದ್ದಾರೆ. ವೃತ್ತಿರಂಗಭೂಮಿಯ ರಂಗಾಯಣ ಹುಟ್ಟಲು ಕಡಕೋಳ ಮೂಲ ಕಾರಣ. ಮಹಲಿಂಗ ರಂಗ ಅವರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿಗೆ ಅವರು ಅರ್ಹರಾಗಿದ್ದಾರೆ ಎಂದರು.

`ಮಹಲಿಂಗರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿದ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ಪ್ರಶಸ್ತಿಯಿಂದ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದ್ದು, ಹೊಸತನ, ಉತ್ಸಾಹದಿಂದ ಮತ್ತೆ ಬರವಣಿಗೆ ಆರಂಭಿಸುತ್ತೇನೆ. ಈಗಾಗಲೇ `ನಾಟಕ-ಕರ್ನಾಟಕ’ ಕೃತಿ ಪ್ರಕಟಣೆಗೆ ಸಿದ್ಧವಾಗಿದೆ ಎಂದರು.

ಇದೇ ವೇಳೆ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನವೀಕೃತ ಸ್ಮರಣ ಸಂಚಿಕೆ `ಸಂಗಮ ಸಿರಿ’ ಲೋಕಾರ್ಪಣೆಗೊಳಿಸಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಗೌರಮ್ಮ ಪಿ.ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್  ಸದಸ್ಯ  ಮೋತಿ ಆರ್. ಸುಬ್ರಹ್ಮಣ್ಯ ರಾವ್, ಸಾಹಿತಿ ಎನ್.ಟಿ. ಎರ್ರಿಸ್ವಾಮಿ, ಪ್ರೊ.ಸಿ.ವಿ. ಪಾಟೀಲ್ ಇತರರು ಉಪಸ್ಥಿತರಿದ್ದರು.

ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಳೆಪ್ಪ ಸ್ವಾಗತಿಸಿದರು. ಶರಧಿ ಕಲಾ ಸಾಂಸ್ಕೃತಿಕ ಸಂಸ್ಥೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಜಗದೀಶ ಕೂಲಂಬಿ ನಿರೂಪಿಸಿದರು.

error: Content is protected !!