ಡಿ.1ರಿಂದ ಥೀಮ್ ಪಾರ್ಕ್ ಸಾರ್ವಜನಿಕ ವೀಕ್ಷಣೆಗೆ

ಡಿ.1ರಿಂದ ಥೀಮ್ ಪಾರ್ಕ್ ಸಾರ್ವಜನಿಕ ವೀಕ್ಷಣೆಗೆ

ದಾವಣಗೆರೆ, ನ.28- ನಗರದ ದೃಶ್ಯಕಲಾ ಮಹಾವಿದ್ಯಾಲಯದ ಬಳಿ ನಿರ್ಮಿಸಲಾಗಿರುವ ಥೀಮ್  ಪಾರ್ಕ್‌ ಬರುವ ಡಿಸೆಂಬರ್ 1 ರಿಂದ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಹೇಳಿದರು.

ಥೀಮ್ ಪಾರ್ಕ್‌ ಬಳಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಡಿ.6 ರಂದು ಸಾಂಕೇತಿಕವಾಗಿ ಉದ್ಘಾಟಿಸಲಾಗು ವುದು. ಅಂದು ಉಚಿತ ಪ್ರವೇಶವಿರಲಿದೆ ಎಂದರು.

ಥೀಮ್ ಪಾರ್ಕ್ ಮತ್ತು ಬಯಲು ರಂಗ ಮಂದಿರಗಳು ಜಿಲ್ಲೆಯ ಏಕೈಕ ಆಕರ್ಷಣೆಯ ಕಲಾ ಕೇಂದ್ರವಾಗಿದೆ. ವಿದ್ಯಾರ್ಥಿಗಳಿಗೆ ಮನೊರಂಜನೆ ನೀಡುವ ಜೊತೆಗೆ ಸಾಂಪ್ರದಾಯಿಕ ಕೃಷಿ, ಮತ್ತು ಇತರ ಹಳ್ಳಿಗಾಡಿನ ವೃತ್ತಿಗಳನ್ನು ಕಲೆ ಮತ್ತು ವಾಸ್ತುಶಿಲ್ಪದ ರೂಪಗಳ ಮೂಲಕ ಪ್ರದರ್ಶಿಸಿ, ಗ್ರಾಮೀಣ ಪರಿಸರದ ಪರಿಚಯ ಮಾಡಿಕೊಡುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.

ಇಲ್ಲಿ ಕಲೆಯ ಮೂಲಕ ಕರ್ನಾಟಕದ ಗ್ರಾಮೀಣ ಜನರ ಜೀವನದ ಪರಿಚಯವನ್ನು ಸಂಯೋಜಿಸಲಾಗಿದೆ. ಮುಂದಿನ ಪೀಳಿಗೆಗೆ ದೊರಕಲಾಗದ, ಅಕ್ಷರಗಳಲ್ಲಿ ತಿಳಿಸಲಾಗದ ಜೀವನ ಶೈಲಿ, ಆಟ, ಪಾಠ, ಆಚಾರ, ವೃತ್ತಿ-ವ್ಯವಹಾರ, ವಿಚಾರ, ಜನಪದರ ಬದುಕಿನ ವೈಪರಿಯನ್ನು ಇಲ್ಲಿ ಸೃಜನಾತ್ಮಕ ಕಲಾಕೃತಿಗಳು ವಿವರಿಸುತ್ತವೆ. ಗ್ರಾಮೀಣ ಬದುಕನ್ನು ಮತ್ತೆ ಕಟ್ಟಿ-ಕಟ್ಟುವ ಪ್ರಯತ್ನ ಇದಾಗಿದೆ ಎಂದರು.

ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಒಟ್ಟು ಎರಡು ಎಕರೆ ಜಾಗದಲ್ಲಿ ಥೀಮ್ ಪಾರ್ಕ್ ಮತ್ತು ಬಯಲು ರಂಗ ಮಂದಿರವನ್ನು ವಿನ್ಯಾಸಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕಲಾ ಗ್ಯಾಲರಿ, ಥೀಮ್ ಗಾರ್ಡನ್, ಕಲಾಕೃತಿಗಳ ವಸ್ತುಸಂಗ್ರಹಾಲಯ, ಚಿತ್ರಕಲೆಗಳ ಪ್ರದರ್ಶನದ ವ್ಯವಸ್ಥೆ ಮಾಡುವ ಉದ್ದೇಶವಿದೆ. ದಾರಿಯ ಸಮಸ್ಯೆ ಇದ್ದು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ದಾರಿ ಗೇಟ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದರು.

ದೃಶ್ಯಕಲಾ ಮಹಾವಿದ್ಯಾಲಯದ ಸಲಹಾ ಸಮಿತಿ ಸದಸ್ಯರೂ ಆಗಿರುವ ಹಿರಿಯ ಪತ್ರಕರ್ತ  ಬಾ.ಮ. ಬಸವರಾಜಯ್ಯ ಮಾತನಾಡುತ್ತಾ,   ಥೀಮ್ ಪಾರ್ಕ್‌ನಲ್ಲಿರುವ ಗ್ರಾಮೀಣ ಪರಿಸರ, ಹಳೆ ದಾವಣಗೆರೆ ನವಿರಾದ ಇತಿಹಾಸ, ದುಗ್ಗಮ್ಮನ ಜಾತ್ರೆ ಪರಿಕಲ್ಪನೆಗಳು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿವೆ ಎಂದರು.

ಸಲಹಾ ಸಮಿತಿಯ ಮತ್ತೋರ್ವ ಸದಸ್ಯರುಗಳಾದ ಮಹಾಲಿಂಗಪ್ಪ, ಸಿದ್ದರಾಜು, ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈರಾಜ ಚಿಕ್ಕ ಪಾಟೀಲ, ಐಕ್ಯೂಎಸಿ ಸಂಯೋಜನಾಧಿಕಾರಿ ಡಾ. ಸತೀಶಕುಮಾರ್ ವಲ್ಲೇಪುರೆ, ದಾವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ ಕಣಸೋಗಿ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!