ಜಗತ್ತಿನಲ್ಲಿ ಸತ್ಯ ಎನ್ನುವುದು ಇಲ್ಲ, ಬದಲಾವಣೆ ಮಾತ್ರ ಸತ್ಯ

ಜಗತ್ತಿನಲ್ಲಿ ಸತ್ಯ ಎನ್ನುವುದು ಇಲ್ಲ, ಬದಲಾವಣೆ ಮಾತ್ರ ಸತ್ಯ

 ಬ್ಯಾಡಗಿಯಲ್ಲಿನ ಪ್ರವಚನದಲ್ಲಿ ಕೊಪ್ಪಳ ಶ್ರೀಗಳ ಅಭಿಮತ

ಬ್ಯಾಡಗಿ, ನ.22- ಈಗ ಇದ್ದದ್ದು, ಸ್ವಲ್ಪ ಹೊತ್ತಿಗೆ ಇರಲ್ಲ, ಬದಲಾಗುತ್ತದೆ. ಇದನ್ನೇ ಬದಲಾವಣೆ ಜಗದ ನಿಯಮ ಎಂದು ಕರೆಯಲಾಗಿದೆ. ಈ ಜಗತ್ತಿನಲ್ಲಿ ಸತ್ಯ ಎನ್ನುವುದು ಇಲ್ಲ. ಬದಲಾವಣೆ ಮಾತ್ರ ಸತ್ಯವಾಗಿದೆ ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ  ವಿಶ್ಲೇಶಿಸಿದರು.

ಇಲ್ಲಿನ ಎಸ್‌ಜೆಜೆಎಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಧ್ಯಾತ್ಮ ಪ್ರವಚನ ಕಾರ್ಯಕ್ರಮದ 10ನೇ ದಿನವಾದ ಶುಕ್ರವಾರ ಸಂಜೆ ಶ್ರೀಗಳು ಪ್ರವಚನ ನೀಡಿದರು.

ಜಗತ್ತು ಎಂದರೆ ಚಲನಶೀಲ ಹಾಗೂ ತಿಳಿದು ಬದುಕುವುದಾಗಿದೆ. ಬದುಕಿಗೆ ಅನ್ನ, ಆಶ್ರಯ, ಹರಿವೆ ಎಷ್ಟು ಮುಖ್ಯವೋ ಅರಿವು ಕೂಡಾ ಅಷ್ಟೇ ಮುಖ್ಯವಾಗಿದೆ. ಅರಿವು ಇಲ್ಲದ ಬದುಕು ಶೂನ್ಯದಂತಾಗುತ್ತದೆ ಎಂದು ಎಚ್ಚರಿಸಿದ ಶ್ರೀಗಳು. ಮನುಷ್ಯ ಈ ಜಗತ್ತಿಗೆ ಪ್ರವಾಸಿಗನಾಗಿ ಬರುತ್ತಾನೆ. ಅವನಿಗೆ ಈ ಜಗತ್ತಿನ ಅರಿವು ಇರಬೇಕು. ಗೊತ್ತಿಲ್ಲದಿದ್ದರೆ ತಿಳಿದವರ ಬಳಿ ತಿಳಿದುಕೊಳ್ಳಬೇಕೆಂದರು.

ಬದುಕಿನಲ್ಲಿ ಬಾಲ್ಯ, ಯೌವನ, ಮುಪ್ಪು ಮತ್ತು ಆಚಾರ-ವಿಚಾರಗಳು ಹೇಗೆ ಸದಾ ಕಾಲ ಉಳಿಯುವುದಿಲ್ಲವೋ ಹಾಗೆಯೇ ಈ ಜಗತ್ತಿನಲ್ಲಿ ಕಂಡದ್ದು ಕಂಡ ಹಾಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬದಲಾವಣೆಯ ಈ ಜಗತ್ತಿನಲ್ಲಿ ಬಡತನ, ಶ್ರೀಮಂತಿಕೆ ಆವರ್ತನ ಅಷ್ಟೇ. ಅಂತಹ ಆವರ್ತನವನ್ನು ಅರಿತು ಬದುಕುವವರನ್ನು ಸಂತರು ಎನ್ನುತ್ತಾರೆ. ಪಾಪ ಕೊಡುವ ಜಗತ್ತಿನಲ್ಲಿ, ಪಾಪ ಮಾಡಿಕೊಳ್ಳದಂತೆ ಬದುಕುವವರೆ ತಪಸ್ವಿಗಳಾಗಿದ್ದಾರೆ. 

ಬದುಕುವವನು ಧೀರನಾಗುತ್ತಾನೆ. ಹಾಗಾಗಿ ಜೀವನದಲ್ಲಿ ಭರವಸೆ ಮತ್ತು ಸಮಾಧಾನದ ಯೋಗವನ್ನು ಕಲಿತು, ತಾಳ್ಮೆಯಿಂದ ನಡೆದುಕೊಂಡರೆ ಬದುಕು ಸಂತೋಷವಾಗಿ, ಸುಂದರವಾಗಿರುತ್ತದೆ.

ಜೀವನದಲ್ಲಿ ಹೊಂದಿಕೊಂಡು ಹೋಗುವುದನ್ನು ಮತ್ತು ಕಷ್ಟ ಸಹಿಸಿಕೊಂಡು, ಕಷ್ಟಪಡುವುದನ್ನು ಕಲಿತರೆ ನೀವು ಯಶಸ್ಸು ಪಡೆಯುತ್ತೀರಿ ಎಂದು ಹೇಳುವ ಮೂಲಕ ಗವಿಸಿದ್ದೇಶ್ವರ ಶ್ರೀಗಳು, ಜನರ ಮನಸ್ಸನ್ನು ಅರಳಿಸುವ ಪ್ರಯತ್ನ ಮಾಡಿದರು.

ಶ್ರೀಗಳ ಪ್ರವಚನ ಕಾರ್ಯಕ್ರಮವು ನಾಡಿದ್ದು ದಿನಾಂಕ 24ರ ಭಾನುವಾರ ಮುಕ್ತಾಯಗೊಳ್ಳಲಿದೆ.

ವಿಜಯಪುರದ ಶ್ರೀ ಸಿದ್ದೇಶ್ವರ ಶ್ರೀಗಳ ಮಾದರಿಯಲ್ಲಿಯೇ ಕೊಪ್ಪಳ ಶ್ರೀಗಳು ಅಧ್ಯಾತ್ಮ ಕಾರ್ಯಕ್ರಮ ನಡೆಸುತ್ತಿದ್ದು, ಇವರ ಪ್ರವಚನ ಕೇಳಲು ಜನಸ್ತೋಮವೇ ಸೇರುತ್ತಿದೆ.

error: Content is protected !!