ಹಾಲಿನ ಸೊಸೈಟಿಗಳಂತೆ ಕಾಳಿನ ಸೊಸೈಟಿಗಳಾಗಲಿ: ಸಂಸದ ಗೋವಿಂದ ಕಾರಜೋಳ
ದಾವಣಗೆರೆ, ನ. 22 – ಸಹಕಾರಿ ಸಂಸ್ಥೆಗಳು ದೇಶದ ಜಿ.ಡಿ.ಪಿ.ಗೆ ಶೇ.33ರಷ್ಟು ಕೊಡುಗೆ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಮೋದಿ ಸರ್ಕಾರ ಸಹಕಾರಕ್ಕೆ ಪ್ರತ್ಯೇಕ ಇಲಾಖೆ ರೂಪಿಸಿ, 55 ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಸಹಕಾರ ಭಾರತಿ – ಕರ್ನಾಟಕದ ವತಿಯಿಂದ ಆಯೋಜಿಸಿದ್ದ ರಾಜ್ಯ ಸಹಕಾರಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಸಂಸ್ಥೆಗಳು ರೈತರಿಗೆ ಸಾಲ ನೀಡುವುದಷ್ಟೇ ಅಲ್ಲದೇ, ಅನಿಲ ಪೂರೈಕೆಯಿಂದ ಹಿಡಿದು ನ್ಯಾಯ ಬೆಲೆ ಅಂಗಡಿ ತೆರೆಯುವುದರವರೆಗೆ ಹಲವಾರು ಅವಕಾಶಗಳನ್ನು ಹೊಂದಿವೆ ಎಂದು ಕಾರಜೋಳ ಹೇಳಿದರು.
ನ್ಯಾಯ ಬೆಲೆ ಅಂಗಡಿಗಳನ್ನು ಸಹಕಾರಿ ಸಂಸ್ಥೆಗಳು ಸ್ಥಾಪಿಸಿದಲ್ಲಿ ಸಂಸ್ಥೆಗೆ ಅನುಕೂಲವಾಗುವ ಜೊತೆಗೆ, ಜನರಿಗೂ ಸಮರ್ಪಕ ಸೌಲಭ್ಯಗಳು ಸಿಗುತ್ತವೆ. ಸಹಕಾರಿಗಳು ಹಾಲಿನ ಸೊಸೈಟಿಗಳು ಸ್ಥಾಪಿಸಿ ಯಶಸ್ಸು ಕಂಡಿದ್ದಾರೆ. ಅದೇ ಸಹಕಾರಿ ಸಂಸ್ಥೆಗಳಲ್ಲಿ ನ್ಯಾಯ ಬೆಲೆ ಅಂಗಡಿಗಳು ಸ್ಥಾಪನೆಯಾದಲ್ಲಿ ಅವುಗಳು ‘ಕಾಳಿನ ಸೊಸೈಟಿ’ಗಳಾಗಲಿವೆ ಎಂದು ಕಾರಜೋಳ ಹೇಳಿದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ, ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ಸೇರಿಕೊಂಡಿರುವ ಕಾರಣ ಹಲವು ಸಂಸ್ಥೆಗಳು ಮುಳುಗುವಂತಾಗಿದೆ ಎಂದು ವಿಷಾದಿಸಿದರು.
ಸಹಕಾರ ನೀರಾವರಿಯಿಂದ ರೈತರಿಗೆ ಉಪಕಾರ
ನೀರಾವರಿ ವಲಯದಲ್ಲೂ ಸಹಕಾರ ವ್ಯವಸ್ಥೆ ತರಲು ದಶಕಗಳಿಂದ ಪ್ರಾಯೋಗಿಕ ಪ್ರಯತ್ನಗಳು ನಡೆದಿವೆ. ಆದರೆ, ಸಫಲವಾಗಿಲ್ಲ. ನೀರಾವರಿಯಲ್ಲಿ ಸಹಕಾರ ಯಶಸ್ವಿಯಾದಲ್ಲಿ ಕಡಿಮೆ ಖರ್ಚಿನಲ್ಲಿ ನೀರಿನ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ಹಳ್ಳ – ಕೊಳ್ಳ, ಕೆರೆ – ಕಟ್ಟೆ ಬಳಸಿ ಸಾಮೂಹಿಕ ನೀರಾವರಿಗೆ ರೈತರು ಮುಂದಾಗಬೇಕಿದೆ. ಸಾಮೂಹಿಕ ಪ್ರಯತ್ನದಿಂದ ಇದರಲ್ಲಿ ಯಶಸ್ಸು ಕಾಣಬಹುದು ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
500 ರೂ.ಗಳಿಂದ 5 ಲಕ್ಷಕ್ಕೆ ಬಂದ ಕೃಷಿ ಸಾಲ
ಒಂದು ಕಾಲದಲ್ಲಿ ಸಹಕಾರಿ ಸಂಸ್ಥೆಗಳು 500 ರೂ. ಸಾಲ ನೀಡಲು ಪರದಾಡುತ್ತಿದ್ದವು. ಈಗ ರೈತರಿಗೆ 5 ಲಕ್ಷ ರೂ.ಗಳ ಬಡ್ಡಿ ರಹಿತ ಸಾಲ ನೀಡುವ ಮಟ್ಟಿಗೆ ಸಹಕಾರಿ ಸಂಸ್ಥೆಗಳು ಬೆಳೆದಿವೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ದಶಕಗಳ ಹಿಂದೆ ಸಹಕಾರಿ ಸಂಸ್ಥೆಗಳು 200 ರೂ. ಸಾಲ ನೀಡಲು ಮಾತ್ರ ಅವಕಾಶ ಇತ್ತು. ಅದನ್ನು 500 ರೂ.ಗಳಿಗೆ ಹೆಚ್ಚಿಸುವುದು ಹರಸಾಹಸವಾಗಿತ್ತು. ಈಗ ರೈತರ ಅಗತ್ಯಗಳನ್ನು ಮೀರಿಯೂ ಹೆಚ್ಚಿನ ಸಾಲ ಪಡೆಯುವ ವ್ಯವಸ್ಥೆ ಇದೆ ಎಂದರು.
ಅತ್ಯುತ್ತಮವಾಗಿ ಕೆಲಸ ಮಾಡುವ ವ್ಯಕ್ತಿಗಳನ್ನು ಸಹಕಾರಿ ಸಂಘಕ್ಕೆ ಅಧ್ಯಕ್ಷರು ಹಾಗೂ ಸದಸ್ಯರಾಗಿ ನೇಮಿಸಬೇಕೇ ಹೊರತು, ರಾಜಕೀಯ ಕಾರಣಕ್ಕಾಗಿ ಅಲ್ಲ. ಸಹಕಾರಿ ಸಂಸ್ಥೆಗಳ ಅಧಿಕಾರ ಹಿಡಿಯುವವರಲ್ಲಿ ಸಂಸ್ಥೆಗಳನ್ನು ಬೆಳೆಸುವ ಶಕ್ತಿ ಇರಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರ ಭಾರತಿ ರಾಜ್ಯಾಧ್ಯಕ್ಷ ರಾಜಶೇಖರ್ ಶೀಲವಂತ್, ಸಹಕಾರಿ ಚಳುವಳಿಗೆ ಯುವಕರ ಅಗತ್ಯವಿದೆ. ಹೆಚ್ಚು ಯುವಕರು ಸಹಕಾರಿ ವಲಯಗಳಿಗೆ ಪ್ರವೇಶ ಪಡೆಯಬೇಕು ಎಂದು ತಿಳಿಸಿದರು.
ಯುವ ಪೀಳಿಗೆಗೆ ಸಹಕಾರಿ ವಲಯದ ಕುರಿತು ಆಸಕ್ತಿ ಬರುತ್ತಿಲ್ಲ. ಸ್ಥಳೀಯ ಸಹಕಾರಿಗಳು ಈ ಬಗ್ಗೆ ವಿಶೇಷ ಜವಾಬ್ದಾರಿ ವಹಿಸಬೇಕಿದೆ. ಸಂಘಗಳಲ್ಲಿ ಯುವಕರಿಗೆ ನಿರ್ದೇಶಕರಾಗಲು ಅವಕಾಶ ನೀಡದೇ ಈ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದರು.
ಹಾಸನ ಜಿಲ್ಲೆಯ ಶ್ರೀ ಪುಷ್ಪಗಿರಿ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ವೇದಿಕೆಯ ಮೇಲೆ ಸಹಕಾರ ಭಾರತಿ ರಾಷ್ಟ್ರೀಯ ಸಂರಕ್ಷಕ್ ರಮೇಶ್ ವೈದ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉದಯ ವಾಸುದೇವ್ ಜೋಶಿ, ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಜಿ. ನಂಜನಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ್ದಾಸ್ ನಾಯ್ಡು, ಜಿಲ್ಲಾಧ್ಯಕ್ಷ ಜಿ.ಎನ್. ಸ್ವಾಮಿ, ಕಾರ್ಯಾಧ್ಯಕ್ಷ ಎಂ.ಆರ್. ಪ್ರಭುದೇವ್, ಉಪಾಧ್ಯಕ್ಷ ಜಿ.ಎನ್. ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ಟಿ. ವೀರೇಶ್, ಖಜಾಂಚಿ ಮುರುಗೇಶ್ ಆರಾಧ್ಯ, ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ಹೆಚ್.ಎಸ್. ಮಂಜುನಾಥ್ ಕುರ್ಕಿ, ಆರ್.ಎಸ್.ಎಸ್. ದಕ್ಷಿಣ ಪ್ರಾಂತ್ಯ ಕಾರ್ಯವಾಹಕ ಪ್ರಕಾಶ್ಜೀ, ಸಹಕಾರಿ ಸಂಸ್ಥೆಗಳ ನಿವೃತ್ತ ಅಪರ ನಿಬಂಧಕ ಸಿದ್ದರಾಮ್ ಮೆಲಪ್ಪ ಕಲ್ಲೋತಿ ಮತ್ತಿತರರು ಉಪಸ್ಥಿತರಿದ್ದರು.