ಜಗಳೂರು ಠಾಣೆಗೆ ಭೇಟಿ ನೀಡಿದ ಐಜಿಪಿ ರಮೇಶ್ ಬಾನೋತ್
ಜಗಳೂರು, ನ.22- ಸಾರ್ವಜನಿಕರು ಆನ್ ಲೈನ್ ವಂಚಕರ ಬಗ್ಗೆ ಜಾಗೃತರಾಗಿರಬೇಕೆಂದು ಪೂರ್ವವಲಯ ಐಜಿಪಿ ರಮೇಶ್ ಬಾನೋತ್ ಹೇಳಿದರು.
ಪಟ್ಟಣದ ಜಗಳೂರು ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಆನ್‌ಲೈನ್ ವಂಚನೆ ಪ್ರಕರಣಗಳು ನಿತ್ಯ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಅತೀ ಜಾಗರೂಕರಾಗಿರಬೇಕು ಎಂದರು.
ಘಟನೆ ನಡೆದ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಬೇಕು. ಇಲ್ಲವೇ ಸಮೀಪದ ಠಾಣೆಗೆ ದೂರು ನೀಡಿದರೆ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಯಿಂದ ಹಣ ವಾಪಸ್ಸು ಪಡೆಯಲು ಸಹಕಾರಿಯಾಗುತ್ತದೆ. ಘಟನೆ ನಡೆದು ಎಂಟು ದಿನಗಳು ಕಳೆದ ನಂತರ ಬಂದು ದೂರು ನೀಡಿದರೆ ಆರೋಪಿಯು ತಪ್ಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಯುವ ಸಮೂಹಕ್ಕೆ ಐಷಾರಾಮಿ ಜೀವನ ನಡೆಸುವ ಗೀಳು ಒಂದು ಕಡೆಯಾದರೆ, ಒಂದೇ ತಿಂಗಳಲ್ಲಿ ಒಂದು ಲಕ್ಷ ಡಬಲ್ ಆಗುತ್ತದೆ ಎಂದು ನಂಬಿ ಅಮಾಯಕರು ಕಂಪನಿಗಳಿಗೆ ಕೋಟಿಗಟ್ಟಲೇ ಇನ್ವೆಸ್ಟ್ ಮಾಡುತ್ತಾರೆ ಇದರಿಂದ ಮೋಸ ಹೋಗುತ್ತಾರೆ ಯಾವುದೇ ಕಂಪನಿಯಿಂದ ಒಂದೇ ತಿಂಗಳಲ್ಲಿ ಡಬಲ್ ಆಗುವುದಿಲ್ಲ ಇದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.
ಜಗಳೂರು ಮತ್ತು ಬಿಳಿಚೊಡು ಪೊಲೀಸ್ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪೋಲಿಸ್ ಠಾಣೆ ಪ್ರಾರಂಭದಲ್ಲಿ ಮಂಜೂರಾತಿಯಂತೆ ಹುದ್ದೆಗಳನ್ನು ನೇಮಕ ಮಾಡಲಾಗಿತ್ತು. ಈಗ ಸಿಬ್ಬಂದಿಯ ಅವಶ್ಯಕತೆ ಇದ್ದು ನಿಯೊಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಚಿತ್ರದುರ್ಗ, ದಾವಣಗೆರೆ, ಹಾವೇರಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿವೆ ಎಂದರು.
ಪೊಲೀಸ್ ಸಿಬ್ಬಂದಿಗಳಿಗನುಗುಣವಾಗಿ ವಸತಿ ಗೃಹಗಳಿಲ್ಲ ಎಂಬ ಮಾಹಿತಿಯಿದ್ದು ಸರ್ಕಾರಿ ಜಮೀನಿನಲ್ಲಿ ಹೆಚ್ಚುವರಿ ವಸತಿಗೃಹ ಕಟ್ಟಡಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ ಪಿ. ಬಸವರಾಜ್, ಸಿಪಿಐ ಶ್ರೀನಿವಾಸ್ ರಾವ್, ಪಿಎಸ್‌ಐಗಳಾದ ಆಶಾ, ನಟರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.