ಹರಿಹರ: ವಿಶ್ವಕರ್ಮ ಸಮಾಜಕ್ಕೆ ಪಂಚ ವೃತ್ತಿ

ಹರಿಹರ: ವಿಶ್ವಕರ್ಮ ಸಮಾಜಕ್ಕೆ ಪಂಚ ವೃತ್ತಿ

ಭಗವಾನ್ ಶ್ರೀ ವಿಶ್ವಕರ್ಮ ಮಹೋತ್ಸವದಲ್ಲಿ ಶಿವಸುಜ್ಞಾನತೀರ್ಥ ಶ್ರೀ

ಹರಿಹರ, ಅ.6- ಪ್ರತಿಯೊಂದು ಧರ್ಮಿಯರಿಗೂ ಒಂದೊಂದು ವೃತ್ತಿ ಇದ್ದರೆ, ವಿಶ್ವಕರ್ಮ ಸಮಾಜಕ್ಕೆ ಪಂಚ ವೃತ್ತಿ ಇದೆ. ಎಲ್ಲರಿಗೂ ಬೇಕಾದ ಅವಶ್ಯಕ ವಸ್ತುಗಳನ್ನು ತಯಾರಿಸಿ ಕೊಡುವ ವೈಶಿಷ್ಠ ವಿಶ್ವಕರ್ಮ ಸಮಾಜ ಕರಗತ ಮಾಡಿಕೊಂಡಿದೆ ಎಂದು ಅರೆಮಾದನಹಳ್ಳಿ ಸುಜ್ಞಾನಪ್ರಭು ಸಂಸ್ಥಾನಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ತಿಳಿಸಿದರು.

ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಶ್ರೀ ವಿಶ್ವಕರ್ಮ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಗರದ ಗುರುಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಭಗವಾನ್ ಶ್ರೀ ವಿಶ್ವಕರ್ಮ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮರ,  ಶಿಲೆ, ಬೆಳ್ಳಿ, ಬಂಗಾರ, ತಾಮ್ರ ಸೇರಿದಂತೆ ಹತ್ತು ಹಲವು ವಸ್ತುಗಳನ್ನು ತಿದ್ದಿ ತೀಡಿ ಸಮಾಜದ ಒಳಿತಿಗೆ ಅರ್ಪಿಸುವ ಕಲೆ ಸಮಾಜಕ್ಕೆ ಸಿದ್ದಿಸಿದೆ. ಇವುಗಳನ್ನು ಒಂದು ವರ್ಗ ಒಂದು ಜಾತಿಯ ಜನರಷ್ಟೇ ಬಳಸದೇ ಎಲ್ಲಾ ಸಮಾಜದವರ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ಬಳಸುವಂತ ಕಾರ್ಯ ನಮ್ಮ ಸಮಾಜದಿಂದ ಆಗುತ್ತಿರುವುದು ಅತ್ಯಂತ ಗೌರವ ತರುವ ಸಂಗತಿ ಎಂದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಪಿ. ಹರೀಶ್, ಈ ಹಿಂದೆ ಶಾಸಕನಾಗಿದ್ದಾಗ ಸಮಾಜದ ಕಾರ್ಯಗಳಿಗೆ ಹಲವು ಅನುದಾನಗಳನ್ನು ನೀಡಿದ್ದೇನೆ. ಪ್ರಸ್ತುತ ಶಾಸಕರ ಅನುದಾನದಲ್ಲಿ 5 ಲಕ್ಷ ಮಾತ್ರ ನೀಡಲು ಅನುಮತಿ ಇದ್ದು, ಖಂಡಿತ ನೀಡುತ್ತೇನೆ ಎಂದರು.

ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿ, ದೇವಸ್ಥಾನದ ರಸ್ತೆಗೆ ಜಕಣಾಚಾರಿ ಅವರ ಹೆಸರು ಇಡಲು ನಗರಸಭೆಯಲ್ಲಿ ತೀಮಾನಿಸಬಹುದು. ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಜಕಣಾಚಾರಿ ಮೂರ್ತಿ ಸ್ಥಾಪಿಸಲು ಹಾಗೂ ರಸ್ತೆಗೆ ಅವರ ಹೆಸರು ಇಡಲು ನನ್ನ ಸಹಮತಿ ಇದೆ. ಈಬಗ್ಗೆ ಅರ್ಜಿ ನೀಡಿ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಖ್ಯ ಮಂತ್ರಿಗಳ ಜತೆ ಚರ್ಚಿಸಿ ಮೂರ್ತಿ ಸ್ಥಾಪನೆಗೆ ಪ್ರಯತ್ನಿಸುತ್ತೇನೆ ಎಂದರು.

ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಸರ್ಕಾರದಿಂದ ಸಮಾಜಕ್ಕೆ ಅನುದಾನ ನಿರೀಕ್ಷಿಸಬೇಡಿ. ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ನೀಡಿ. ಸಮಾಜದ ಜನತೆ ಕುಲ ಕಸುಬು ಬಿಡಬೇಡಿ, ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ಮರೆಯಬೇಡಿ ಎಂದರು.

ವಿಶ್ವಕರ್ಮ ಸಮಾಜದ ಅಧ್ಯಕ್ಷ ಶಿಲ್ಪಿ ನಾಗರಾಜಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಸಾಕಷ್ಟು ಜಾಗ ಇದ್ದು, ಸಮಾಜದ ಜನತೆಗೆ ಸಮುದಾಯ ಭವನ, ಮಹಾದ್ವಾರಕ್ಕೆ ಗೇಟ್‍ಗೆ ಅನುದಾನ, ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಶಿಲ್ಪಿ ಜಕಣಾಚಾರಿಯ ಮೂರ್ತಿ ಸ್ಥಾಪಿಸುವಂತೆ ಮನವಿ ಮಾಡಿದರು.

ವಡ್ಡನಹಾಳ್ ಸಂಸ್ಥಾನ ಸಾವಿತ್ರೀ ಪೀಠ ಕಾಶಿಮಠದ ಶಂಕರಾತ್ಮಾನಂದ ಸರಸ್ವತೀ ಸ್ವಾಮಿಜಿ ಹಾಗೂ ಹುಲುಗೂರು ಜೀವನ್ ಮುಕ್ತಾಲಯದ ಮೌನೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಶಿಲ್ಪಿ ಬಿ.ಕೆ. ನಾಗರಾಜಾಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವೀರೇಶ್ ಹನಗವಾಡಿ, ಚಂದ್ರಶೇಖರ ಪೂಜಾರ್, ನಗರಸಭಾ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಎಇಇ ಸಿ.ಎನ್. ರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!