ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಡಾ.ಪ್ರೇಮಾ ಪ್ರಭುದೇವ್
ದಾವಣಗೆರೆ, ಅ.6- ನಮ್ಮ ದೇಶದಲ್ಲಿ ಪ್ರತಿ ವರ್ಷ ಲಕ್ಷದ ಇಪ್ಪತ್ಮೂರು ಸಾವಿರ ಮಹಿಳೆಯರಲ್ಲಿ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಪತ್ತೆ ಆಗುತ್ತಿದ್ದು, ಅದರಲ್ಲಿ ಸುಮಾರು ಎಪ್ಪತ್ತೇಳು ಸಾವಿರ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ ಎಂದು ಖ್ಯಾತ ಸ್ತ್ರೀರೋಗ ತಜ್ಞರಾದ ಡಾ. ಪ್ರೇಮಾ ಪ್ರಭುದೇವ್ ಹೇಳಿದರು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಗರ್ಭಕೋಶದ ಕ್ಯಾನ್ಸರ್ ಕುರಿತಂತೆ ವಿಶೇಷ ಉಪನ್ಯಾಸ ನೀಡಿದ ಅವರು, ಪ್ರತಿದಿನ ಈ ಕ್ಯಾನ್ಸರ್‌ನಿಂದ 211 ಜನ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದರು.
16 ವಯಸ್ಸಿಗಿಂತ ಮುಂಚೆ ವಿವಾಹವಾಗಿ ಸಂಭೋಗ ಕ್ರಿಯೆ ಪ್ರಾರಂಭವಾಗಿದ್ದರೆ, ಪದೇ ಪದೇ ಗರ್ಭ ಧರಿಸಿದ್ದರೆ, 5 ಕ್ಕಿಂತ ಹೆಚ್ಚು ಮಕ್ಕಳಾಗಿದ್ದರೆ, ಮಹಿಳೆಯರು ಜನನಾಂಗದ ಸ್ವಚ್ಚತೆ ಕಾಪಾಡದಿದ್ದರೆ, ಒಬ್ಬರಿಗಿಂತ ಹೆಚ್ಚಿನ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಇದ್ದರೆ, 5 ವರ್ಷಕ್ಕಿಂತ ಹೆಚ್ಚು ಸಮಯ ಗರ್ಭ ನಿರೋಧಕ ಮಾತ್ರೆ ಸೇವಿಸಿದ್ದರೆ, ವಿಟಮಿನ್ ಕೊರತೆ ಇದ್ದರೆ, ಮಹಿಳೆಯರಲ್ಲಿ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಬರುವ ಸಾಧ್ಯತೆಗಳು ಅತೀ ಹೆಚ್ಚು ಎಂದು ಅವರು ವಿವರಿಸಿದರು.
ಗರ್ಭಕೋಶದ ಕೊರಳಿನಲ್ಲಿ ಆಗುವ ಸೋಂಕು ಗುಣವಾಗದಿದ್ದಲ್ಲಿ ಮುಂದೆ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಆಗಿ ಪರಿವರ್ತನೆ ಆಗುವ ಸಾಧ್ಯತೆಗಳು ಹೆಚ್ಚು.
ಮಹಿಳೆಯರು ನಿಯಮಿತವಾಗಿ ಮಹಿಳಾ ವೈದ್ಯರ ಸಲಹೆ ಪಡೆದು, ಪರೀಕ್ಷೆಗಳನ್ನು ಮಾಡಿಸಿಕೊಳ್ಳು ವುದರಿಂದ ಈ ಕಾಯಿಲೆಯ ಆರಂಭಿಕ ಲಕ್ಷಣಗಳನ್ನು ಪತ್ತೆ ಹಚ್ಚಬಹುದಾಗಿದೆ. ಅಲ್ಲದೇ ನಿಯಮಾನುಸಾರ ಲಸಿಕೆ ಪಡೆಯುವ ಮೂಲಕ ಈ ಕೊರಳಿನ ಕ್ಯಾನ್ಸರ್ ತಡೆಗಟ್ಟಬಹುದು ಎಂದರು.
ಹದಿಹರೆಯದ 9ರಿಂದ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಈ ವಯಸ್ಸಿನ ಎಲ್ಲಾ ಹೆಣ್ಣು ಮಕ್ಕಳು ಲಸಿಕೆ ಹಾಕಿಸಿ ಕೊಳುವಂತೆ ಉತ್ತೇಜಿಸಬೇಕಿದೆ.
ಗರ್ಭಿಣಿ ಸ್ತ್ರೀಯರು ಲಸಿಕೆ ಪಡೆಯುವಂತಿಲ್ಲ. ಆದರೆ ಹಾಲುಣಿಸುವ ಬಾಣಂತಿಯರು ಲಸಿಕೆ ಪಡೆಯಬಹುದು ಎಂದು ಡಾ.ಪ್ರೇಮಾ ಪ್ರಭುದೇವ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಪೂಜಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ.ಜಿ.ಗುರುಪ್ರಸಾದ್, ಡಾ. ಬಾಣಾಪುರ ಮಠ್, ಡಾ.ಕೌಜಲಗಿ, ಡಾ.ಮೃತ್ಯುಂಜಯ, ಡಾ.ಬಸಂತ್ ಕುಮಾರ್, ಡಾ.ರೇವಪ್ಪ ಮತ್ತಿತರರು ಭಾಗವಹಿಸಿದ್ದರು.