ಯುಬಿಡಿಟಿ ಕಾಲೇಜಿನಲ್ಲಿ ಪೇಮೆಂಟ್ ಕೋಟಾ ಸರ್ಕಾರ ಮಾಡಿರುವ ಜನದ್ರೋಹ

ಯುಬಿಡಿಟಿ ಕಾಲೇಜಿನಲ್ಲಿ ಪೇಮೆಂಟ್ ಕೋಟಾ ಸರ್ಕಾರ ಮಾಡಿರುವ ಜನದ್ರೋಹ

‘ಯುಬಿಡಿಟಿ ಉಳಿಸಿ’ ಸಮಾವೇಶದಲ್ಲಿ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಆಕ್ರೋಶ

ದಾವಣಗೆರೆ, ಸೆ. 24- ಈಗಾಗಲೇ ಸಮರ್ಪಕ ಸೌಲಭ್ಯಗಳಿಲ್ಲದೆ, ಶಿಕ್ಷಕರ ಹುದ್ದೆಗಳು ನೇಮಕಾತಿಯಾಗದೇ ಶಿಕ್ಷಣ ವ್ಯವಸ್ಥೆಯು ಶೋಚನೀಯ ಸ್ಥಿತಿಯಲ್ಲಿದೆ. ಹೀಗಿರುವಾಗ ಹೆಚ್ಚಿನ ಆರ್ಥಿಕ ಜವಾಬ್ದಾರಿ ವಹಿಸಿ ಸರ್ಕಾರವು ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿಪಡಿಸುವುದನ್ನು ಬಿಟ್ಟು ಯುಬಿಡಿಟಿ ಕಾಲೇಜಿನಲ್ಲಿ ಸೀಟು ಮಾರಾಟ ಮಾಡುತ್ತಿರುವುದು ಜನದ್ರೋಹದ ಕೆಲಸವಾಗಿದೆ ಎಂದು ಬಂಡಾಯ ಸಾಹಿತಿಗಳೂ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಕಾಲೇಜಿನಲ್ಲಿ ಪೇಮೆಂಟ್ ಕೋಟಾ ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಚಳವಳಿಯ ಭಾಗವಾಗಿ ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಿಂದಿನ ರಾಜ್ಯ ಸರ್ಕಾರ ಜಾರಿಗೊಳಿಸಿದ ಶಿಕ್ಷಣ ವಿರೋಧಿ ಕರಾಳ ರಾಷ್ಟ್ರೀಯ ಶಿಕ್ಷಣ ನೀತಿ- 2020ರ ವಿರುದ್ಧ ಹಾಗೂ ಅದರ ಭಾಗವಾದ ನಾಲ್ಕು ವರ್ಷದ ಪದವಿ ವಿರುದ್ಧ ಎಐಡಿಎಸ್ಓ ನೇತೃತ್ವದಲ್ಲಿ ಹಾಗೂ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯಿಂದ ನಡೆದ ಹೋರಾಟದ ಫಲವಾಗಿ ಇಂದು ಪ್ರಸಕ್ತ ರಾಜ್ಯ ಸರ್ಕಾರವು ಆ ನೀತಿಯನ್ನು ಹಿಂಪಡೆದು ರಾಜ್ಯ ಶಿಕ್ಷಣ ನೀತಿಯ ರಚನೆಗೆ ಮುಂದಾಗಿದೆ. ಈ ರೀತಿ ವಿದ್ಯಾರ್ಥಿಗಳು ಬಲಿಷ್ಠ ಚಳವಳಿ ಮೂಲಕ ಯುಬಿಡಿಟಿ ಕಾಲೇಜು ಉಳಿಸಬೇಕೆಂದು ಕರೆ ನೀಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎ. ಮುರುಗಪ್ಪ ಮಾತನಾಡಿ, ಪೇಮೆಂಟ್ ಕೋಟಾ ಎಂಬ ಕೆಟ್ಟ ಸಂಪ್ರದಾಯವನ್ನು ಯುಬಿಡಿಟಿ ಕಾಲೇಜಿನಲ್ಲಿ ಸರ್ಕಾರವು ಆರಂಭಿಸಿದೆ. 

ಒಂದೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳನ್ನು ಒಡೆದು ಆಳುವ ನೀತಿ ಇದಾಗಿದೆ ಎಂದರು.

ರಾಜ್ಯದ ಬಡ ಜನರಿಗೆ 5 ಗ್ಯಾರಂಟಿಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರವು, ಶಿಕ್ಷಣವನ್ನು 6ನೇ ಗ್ಯಾರಂಟಿಯಾಗಿ ನೀಡಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು.

ಡಿ.ಆರ್.ಎಂ. ವಿಜ್ಞಾನ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ಎಸ್. ಈಶ್ವರಪ್ಪ ಮಾತನಾಡಿ, ಇತ್ತೀಚೆಗೆ ಪ್ರಜಾಪ್ರಭುತ್ವ ದಿನವನ್ನು ಅದ್ಧೂರಿಯಿಂದ ಆಚರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರವು ಕಡು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಡ ರೈತ ಕಾರ್ಮಿಕರ ಮಕ್ಕಳನ್ನು ಉನ್ನತ ಶಿಕ್ಷಣದಿಂದ ಹೊರಗಿಡುವ ಈ ನೀತಿಯು ಬುದ್ಧ, ಬಸವ, ಅಂಬೇಡ್ಕರ್ ರಂತಹ ಮಹಾನ್ ವ್ಯಕ್ತಿಗಳ ಆಶಯಗಳಿಗೆ ವಿರುದ್ಧವಾಗಿದೆ. ಬಡವರ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳ ಈ ಹೋರಾಟದ ಕೂಗಿಗೆ ಸ್ಪಂದಿಸಬೇಕು. ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ವಿದ್ಯಾರ್ಥಿಗಳ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಬೇಕು. ವಿದ್ಯಾರ್ಥಿಗಳು ಆರ್ ಜಿ ಕರ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟಿನ ಕಡಿವಾಣವನ್ನೂ ಲೆಕ್ಕಿಸದೆ ಹೋರಾಡಿ ಜಯ ಗಳಿಸಿದ ರೀತಿಯಲ್ಲಿ ‘ಯುಬಿಡಿಟಿ ಉಳಿಸಿ’ ಚಳವಳಿಯು ಯಾವ ಅಡೆತಡೆಯನ್ನೂ ಲೆಕ್ಕಿಸದೆ ಬೆಳೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಯುಬಿಡಿಟಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸುರೇಶ್ ಚಂದ್ರ ಮೋಹನ್ ಮಾತನಾಡಿ, ಈಗಿರುವ 43 ಸಾವಿರ ಶುಲ್ಕವೇ ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಈ ಶುಲ್ಕವನ್ನು ಭರಿಸಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರವೇ ಯುಬಿಡಿಟಿ ಕಾಲೇಜಿನ ಸಂಪೂರ್ಣ ಆರ್ಥಿಕ ಜವಾಬ್ದಾರಿ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. 

ಎಐಡಿಎಸ್ಓನ ರಾಜ್ಯ ಖಜಾಂಚಿ  ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಶುಲ್ಕ ಹೆಚ್ಚಳ ಸೇರಿದಂತೆ ಯುವಿಸಿಇ ಕಾಲೇಜಿನ ಹಲವಾರು ಸಮಸ್ಯೆಗಳ ವಿರುದ್ಧ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ಹಲವಾರು ವಿಜಯಗಳನ್ನು ಗಳಿಸಿದೆ. ಅದೇ ರೀತಿ ಯುಬಿಡಿಟಿ ಹೋರಾಟ ಮುಂದುವರೆಯಬೇಕು. ಈಗ ಯುಬಿಡಿಟಿ ಯಲ್ಲಿ ಸರ್ಕಾರವು ಜಾರಿಗೊಳಿಸಿರುವ ಪೇಮೆಂಟ್ ಕೋಟಾ ಶುಲ್ಕವು ಈ ಸಂಸ್ಥೆಯನ್ನು ಆರ್ಥಿಕ ಸ್ವಾಯತ್ತ ಸಂಸ್ಥೆಯನ್ನಾಗಿಸಿ ಅಂತಿಮವಾಗಿ ಖಾಸಗಿಯವರ ಪಾಲು ಮಾಡುತ್ತದೆ ಎಂದರು.

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘಟನೆಯ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್, ಎಐಡಿಎಸ್ಓ ನಡೆಸಿದ ಮೂರು ದಶಕಗಳ ಹೋರಾಟಗಳ ಫಲವಾಗಿ ಇಲ್ಲಿಯವರೆಗೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಡೊನೇಷನ್ ಕ್ಯಾಪಿಟೇಶನ್ ಹಾವಳಿಯು ತಲೆದೂರಿಲ್ಲ. ಅಷ್ಟೇ ಅಲ್ಲದೆ ಎಐಡಿಎಸ್ಓ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಚಳವಳಿಯಿಂದ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ನಿಗದಿಪಡಿಸಬೇಕಾಯಿತು. ಹೀಗಿರುವಾಗ, ಸರ್ಕಾರಿ ಕಾಲೇಜಿನಲ್ಲಿ ಪೇಮೆಂಟ್ ಕೋಟಾವನ್ನು ಯಾವುದೇ ಕಾರಣಕ್ಕೂ ವಿದ್ಯಾರ್ಥಿ ಸಮೂಹ ಸಹಿಸುವುದಿಲ್ಲ ಎಂದರು.

ಸಂಘಟನೆಯ ಜಿಲ್ಲಾಧ್ಯಕ್ಷರಾದ ಪೂಜಾ ನಂದಿಹಳ್ಳಿ, ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ.ಎಸ್., ಯುಬಿಡಿಟಿ ಕಾಲೇಜು ಹೋರಾಟ ಸಮಿತಿ ಸದಸ್ಯರಾದ ಚಂದನ, ಅಭಿಷೇಕ್, ಅಖಿಲೇಶ್, ಭರತ್, ಆದರ್ಶ್, ಶಿವನಗೌಡ, ರಕ್ಷಿತಾ, ರೀಮಾ, ಮೇಘನಾ, ರುದ್ರೇಶ್, ಸಂತೋಷ್, ಚೇತನ್, ಶ್ರವಣ್, ವಿಜಯ್, ನಾಗೇಂದ್ರ ಸೇರಿದಂತೆ ಯುಬಿಡಿಟಿ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

error: Content is protected !!