ದಾವಣಗೆರೆ, ನಾಗಮಂಗಲ ಘಟನೆಗಳ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ
ಹಿರಿಯ ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ಅವರಿಗೆ ಈ ಬಾರಿ ದಸರಾ ಉದ್ಘಾಟನೆ ಆಹ್ವಾನ
ಬೆಂಗಳೂರು, ಸೆ. 20 – ಬಿಜೆಪಿ ಪ್ರಚೋದನೆಯಿಂದಲೇ ಕೋಮು ಗಲಭೆಗಳಾಗುತ್ತಿವೆ. ಕೋಮು ಗಲಭೆಗಳಿಗೆ ಬಿಜೆಪಿಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾಗಮಂಗಲ ಹಾಗೂ ದಾವಣಗೆರೆಯಲ್ಲಿ ಗಣಪತಿ ವಿಸರ್ಜನೆ ವೇಳೆ ಘಟನೆಗಳು ನಡೆದಿವೆ. ಬಿಜೆಪಿ ಪ್ರಚೋದನೆಯಿಂದಲೇ ಇವೆಲ್ಲಾ ಆಗುತ್ತಿವೆ ಎಂದು ಹೇಳಿದರು.
ರಾಜ್ಯದಲ್ಲಿ ಈ ಬಾರಿ 60 ಸಾವಿರ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಯಾಗಿದೆ. 2 ಕಡೆಗಳಲ್ಲಿ ಮಾತ್ರ ಘಟನೆ ಗಳು ನಡೆದಿವೆ. ದಾವಣಗೆರೆಯಲ್ಲಿ ಕಲ್ಲು ತೂರಾಟವಾಗಿದ್ದರೆ, ನಾಗಮಂಗಲದಲ್ಲಿ ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ. ಪೊಲೀಸರ ಕರ್ತವ್ಯ ನಿರ್ಲಕ್ಷ್ಯ ಕಂಡು ಬಂದಿದ್ದು, ಡಿ.ವೈ.ಎಸ್.ಪಿ ಅವರನ್ನು ಅಮಾ ನತ್ತು ಮಾಡಲಾಗಿದೆ ಎಂದು ಹೇಳಿದರು.
ಹೆಸರಾಂತ ಹಿರಿಯ ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ಅವರನ್ನು ಈ ಬಾರಿ ದಸರಾ ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಸಿದ್ದರಾಮಯ್ಯ ಮತ್ತೊಂದು ಪ್ರಶ್ನೆಗೆ ತಿಳಿಸಿದರು.
ಶಾಸಕ ಮುನಿರತ್ನ ಮೇಲೆ 3 ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಎಸ್ಐಟಿಗೆ ವಹಿಸಬೇಕೆಂದು ತಮ್ಮನ್ನು ಭೇಟಿ ಮಾಡಿದ ಒಕ್ಕಲಿಗ ಸಚಿವರು ಹಾಗೂ ಶಾಸಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದೇನೆ ಎಂದರು.
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆಯನ್ನು ಆದಷ್ಟು ಶೀಘ್ರ ನಡೆಸುವಂತೆ ಕೆ.ಪಿ.ಎಸ್.ಸಿ.ಗೆ ಸೂಚಿಸಲಾಗಿದೆ. ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ವಯೋಮಿತಿಯನ್ನು 27 ರಿಂದ 33 ವರ್ಷಕ್ಕೆ ಏರಿಸಬೇಕೆಂಬ ಬೇಡಿಕೆ ಕುರಿತು ಒಂದು ಬಾರಿಗೆ ಅನ್ವಯವಾಗುವಂತೆ ತೀರ್ಮಾನ ಕೈಗೊಳ್ಳಲು ಗೃಹ ಸಚಿವರಿಗೆ ಸೂಚಿಸಿದ್ದೇನೆ ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರುಗಳ ವಿರುದ್ಧದ ಡಿ-ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ 2021 ರಿಂದ ಲೋಕಾಯುಕ್ತದಲ್ಲಿ ತನಿಖೆ ಬಾಕಿ ಇದೆ. ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಸಂತೋಷ್ ಲಾಡ್ ನಿನ್ನೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಡಿನೋಟಿಫೈ ಪ್ರಕರಣದ ಜಮೀನು ಬಹಳ ಬೆಲೆ ಬಾಳುವಂತಹದ್ದು, ಕುಮಾರಸ್ವಾಮಿ ಅವರು ತಮ್ಮ ಸಂಬಂಧಿಕರಿಗೆ ಡಿನೋಟಿಫೈ ಮಾಡಿಸಿ, ಜಿಪಿಒ ಆಗಿದೆ. ಅಧಿಕಾರಿಗಳು ಈ ಕ್ರಮವನ್ನು ಕಾನೂನಾತ್ಮಕವಲ್ಲ ಎಂದರೂ ಈ ರೀತಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ನಾವು ಯಾರ ಮೇಲೂ ಆರೋಪ ಹೊರಿಸುವ ಕೆಲಸವನ್ನು ಮಾಡಿಲ್ಲ. ಕುಮಾರಸ್ವಾಮಿ ಯಾವಾಗಲೂ ಹಿಟ್ ಅಂಡ್ ರನ್ ಮಾಡುವವರು. ಯಾವ ಆರೋಪವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲ. ಕೇಂದ್ರ ಸಚಿವರಾಗಿದ್ದು ಜವಾಬ್ದಾರಿಯುತವಾಗಿ ವರ್ತಿಸಬೇಕು, ವಿಷಯದ ಸತ್ಯಾಸತ್ಯತೆ ಅರಿತು ಮಾತನಾಡಬೇಕು ಎಂದರು.