ಮಲೇಬೆನ್ನೂರು, ಸೆ.4- ಸತೀಶ್ ಜಾರಕಿಹೊಳಿ ಫೌಂಡೇಷನ್ ಹಲವು ವರ್ಷಗಳಿಂದ ಸಮಾಜಾಭಿವೃದ್ದಿಗೆ ಶ್ರಮಿಸುತ್ತಾ ಬಂದಿದ್ದು, ಇದರ ಅಂಗವಾಗಿ ಮಾನವ ಬಂಧುತ್ವ ವೇದಿಕೆ ಮತ್ತು ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್ ಸಹಯೋಗದಲ್ಲಿ ಹಲವು ಜನಪರವಾದ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿವೆ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ. ಎ.ಬಿ.ರಾಮಚಂದ್ರಪ್ಪ ಹೇಳಿದರು.
ಹನಗವಾಡಿ ಸಮೀಪ ಇರುವ ಪ್ರೊ.ಬಿ.ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಸತೀಶ್ ಜಾರಕಿಹೊಳಿ ಫೌಂಡೇಷನ್ ಮತ್ತು ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಉದ್ಯೋಗ ಆಕಾಂಕ್ಷಿಗಳಿಗೆ ಹಮ್ಮಿಕೊಂಡಿದ್ದ 15 ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಪ್ರಗತಿ ಎಂಬುದು ಬಹುರೂಪಿಯಾದುದು. ಔದ್ಯೋಗಿಕ, ಆರ್ಥಿಕ, ಶೈಕ್ಷಣಿಕ, ವೈಚಾರಿಕ ಅಭಿವೃದ್ಧಿಗೆ ಪೂರಕವಾಗಿ ಎಲ್ಲಾ ಸಮುದಾಯಗಳ ಬಡವರಿಗೆ ಉಚಿತ ತರಬೇತಿ, ಕಾರ್ಯಾಗಾರಗಳನ್ನು ನಡೆಸುತ್ತಿರುವುದು ನಿಜವಾದ ಸಮಾಜಾಭಿವೃದ್ದಿಯ ಮಾರ್ಗವೆಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಟಿವಿ 9 ಹಿರಿಯ ವರದಿಗಾರ ಬಸವರಾಜ ದೊಡ್ಮನಿ ಮಾತನಾಡಿ, ಸತೀಶ್ ಜಾರಕಿಹೊಳಿಯವರ ಸಾಮಾಜಿಕ ಕಾರ್ಯ ಚಟುವಟಿಕೆಗಳು ದೇಶಕ್ಕೆ ಮಾದರಿಯಾಗಿವೆ. ಶೋಷಿತ ಸಮುದಾಯಗಳಿಂದ ಬಂದ ಎಲ್ಲಾ ರಾಜಕಾರಣಿಗಳು ಈ ಬಗೆಯ ಚಟುವಟಿಕೆಗಳನ್ನು ಮಾಡಿದರೆ, ಸಮಸಮಾಜ ತಾನೇ ತಾನಾಗಿ ರೂಪುಗೊಳ್ಳುತ್ತದೆ ಎಂದು ಬಸವರಾಜ ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ತರಬೇತುದಾರ ರೇವಣಯ್ಯ, ಮಂಜುನಾಥ್ ಮೇಗಳಗೇರಿ ವೇದಿಕೆಯಲ್ಲಿದ್ದರು.