ದಾವಣಗೆರೆ, ಸೆ. 1 – ಕಾಂಗ್ರೆಸ್ನವರು ತಮ್ಮ ಹುಳುಕುಗಳನ್ನು ಮುಚ್ಚಿಡಲು ಕೊವಿಡ್ ಹಗರಣ ಎಂಬ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಟೀಕಿಸಿದ್ದಾರೆ.
ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಬದಲಾವಣೆ ಆಗಿ ಒಂದು ವರ್ಷ ನಾಲ್ಕು ತಿಂಗಳಾದ ಮೇಲೆ ಈಗ ಕೊವಿಡ್ ಹಗರಣದ ಬಗ್ಗೆ ಮಾತನಾಡುತ್ತಾರೆ. ಇಷ್ಟು ದಿನ ಏನು ಮಾಡುತ್ತಿದ್ದರು? ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಸುಮ್ಮನಿದ್ದರು. ಏಕೆ ಆಗ ಹಗರಣದಲ್ಲಿ ಪಾಲು ಇತ್ತಾ? ಎಂದು ಲೇವಡಿ ಮಾಡಿದರು.
ಕೊವಿಡ್ ಹಗರಣದ ವರದಿ ಕೈ ಸೇರಿದೆ ಎಂದು ಕಾಂಗ್ರೆಸ್ನರು ಹೇಳುತ್ತಿದ್ದಾರೆ. ಅವರು ತನಿಖೆ ಮಾಡಲಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಎಲ್ಲರೂ ಕಾನೂನಿನ ಅಧೀನರು. ತಪ್ಪು ಮಾಡಿದವರಿಗೆ ಕಾನೂನಿನ ಮೂಲಕ ತನಿಖೆ ಮಾಡಿ ಕಾನೂನಿನ ಪ್ರಕಾರ ಶಿಕ್ಷೆ ಆಗಲಿ ಎಂದರು.
ಆದರೆ, ಕಾಂಗ್ರೆಸ್ನವರು ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಅವರಿವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸರ್ಕಾರ ಕೆಡವಲು ಬಿಜೆಪಿ – ಜೆಡಿಎಸ್ ಹುನ್ನಾರ ಮಾಡುತ್ತಿವೆ ಎಂಬ ಆರೋಪ ತಳ್ಳಿ ಹಾಕಿದ ಬಿ.ಸಿ. ಪಾಟೀಲ್, ಇಂತಹ ಆರೋಪ ಮೂರ್ಖತನದ ಪರಮಾವಧಿ. ಯಾರಾದರೂ 136 ಸ್ಥಾನ ಇರುವ ಸರ್ಕಾರ ಕೆಡವಲು ಸಾಧ್ಯವೇ? ಎಂದು ಕೇಳಿದರು.
ಸುಮ್ಮನೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ತಮ್ಮ ಬೆಲೆಯನ್ನು ತಾವು ಕಟ್ಟಿಕೊಳ್ಳುವಂತೆ ಮಾತನಾಡುತ್ತಿದ್ದಾರೆ. ಈಗ ಬಿಜೆಪಿ ಸರ್ಕಾರ ರಚನೆ ಮಾಡಬೇಕು ಎಂದರೆ 90 ಶಾಸಕರು ಹೊರ ಬರಬೇಕು. ಅದು ಸಾಧ್ಯವಿಲ್ಲ ಎಂದರು.
ಈಗ ಸರ್ಕಾರ ವಿಫಲವಾಗಿದೆ, ಜನರು ಅಭಿವೃದ್ಧಿ ಬಗ್ಗೆ ಕೇಳುತ್ತಿದ್ದಾರೆ. ಜನರ ಗಮನ ಬೇರೆಡೆ ಸೆಳೆಯಲು ವಾರಕ್ಕೊಂದು ಕಾರಣ ಹೇಳಿಕೊಂಡು ಹೋಗುತ್ತಿದ್ದಾರೆ ಎಂದು ಪಾಟೀಲ್ ಹೇಳಿದರು.