ಮಠಕ್ಕೆ ಉತ್ತರಾಧಿಕಾರಿ ನೇಮಿಸಿ ಟ್ರಸ್ಟ್ ಡೀಡ್ ರದ್ದುಗೊಳಿಸಿ

ಮಠಕ್ಕೆ ಉತ್ತರಾಧಿಕಾರಿ ನೇಮಿಸಿ ಟ್ರಸ್ಟ್ ಡೀಡ್ ರದ್ದುಗೊಳಿಸಿ

ದಾವಣಗೆರೆ, ಸೆ.1 – ಸಿರಿಗೆರೆ ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಮಠದ ಉತ್ತರಾಧಿಕಾರಿ ಯನ್ನು ನೇಮಿಸಬೇಕು ಹಾಗೂ ಏಕವ್ಯಕ್ತಿ ಟ್ರಸ್ಟ್ ಡೀಡ್ ರದ್ದುಗೊಳಿಸಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಒತ್ತಾಯಿಸಿದ್ದಾರೆ.

ಅಪೂರ್ವ ರೆಸಾರ್ಟ್‌ನಲ್ಲಿ ಮಠದ ವಿಷಯಗಳ ಸಮಾಲೋಚನೆಗಾಗಿ ಕರೆದಿದ್ದ ಮುಖಂಡರ ಸಭೆಯ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಹಿರಿಯ ಜಗದ್ಗುರುಗಳಾದ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು 60ನೇ ವಯಸ್ಸಿನಲ್ಲಿ ಪೀಠದಿಂದ ನಿವೃತ್ತರಾಗಿದ್ದರು. ಈಗಿನ ಪೀಠಾಧೀಶರಾದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು 65ನೇ ವಯಸ್ಸಿನಲ್ಲಿ ನಿವೃತ್ತರಾಗುವುದಾಗಿ ಘೋಷಿಸಿದ್ದರು. ಆದರೆ, ನಂತರ ನಿವೃತ್ತಿಯಾಗಿರಲಿಲ್ಲ ಎಂದರು.

ನಿವೃತ್ತನಾಗಲು ತಾವು ಸರ್ಕಾರಿ ನೌಕರರೇ ಅಥವಾ ರಾಜಕಾರಣಿಯೇ? ಎಂದು ಈಗ ಹೇಳುತ್ತಿದ್ದಾರೆ. ಅವರ ಮಾತಿಗೆ ಅವರೇ ತಪ್ಪಿ ದ್ದಾರೆ. ಹಿರಿಯ ಜಗದ್ಗುರುಗಳ ಆಣತಿಯಂತೆ ನಿವೃತ್ತಿ ಎಂದವರು, ಮಾತಿನಂತೆ ನಡೆದುಕೊಂಡಿಲ್ಲ ಎಂದರು.

1990ರ ಟ್ರಸ್ಟ್‌ ಡೀಡ್‌ ಸರ್ವಾಧಿಕಾರಿ ಸ್ವರೂಪದಲ್ಲಿದೆ. ಈ ಟ್ರಸ್ಟ್ ಡೀಡ್ ಮೂಲಕ ಉತ್ತರಾಧಿಕಾರಿಯ ಏಕಪಕ್ಷೀಯ ಆಯ್ಕೆ ನಡೆಯುವುದು ಬೇಡ. ಈ ಟ್ರಸ್ಟ್‌ ಡೀಡ್ ರದ್ದು ಮಾಡಿದರೆ, ಉತ್ತರಾಧಿಕಾರಿ ಆಯ್ಕೆ ಬಗ್ಗೆ ನ್ಯಾಯಾಲಯದಲ್ಲಿರುವ ಪ್ರಕರಣವೂ ಬಿದ್ದು ಹೋಗುತ್ತದೆ. 1977ರಲ್ಲಿ ಹಿರಿಯ ಜಗದ್ಗುರುಗಳು ರೂಪಿಸಿದ್ದ ಬೈಲಾ ಪ್ರಕಾರ ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷರು ಹಾಗೂ ಭಕ್ತರು ಸೇರಿಕೊಂಡು ಉತ್ತರಾಧಿಕಾರಿ ಆಯ್ಕೆ ಮಾಡಬೇಕು ಎಂದು ಪಾಟೀಲ್ ಒತ್ತಾಯಿಸಿದರು.

ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪೀಠ ತ್ಯಾಗ ಮಾಡಬೇಕು ಎಂದು ನಾವು ಹೇಳುವುದಿಲ್ಲ. ಉತ್ತರಾಧಿಕಾರಿ ಆಯ್ಕೆ ಮಾಡಬೇಕು ಹಾಗೂ ಟ್ರಸ್ಟ್ ಡೀಡ್ ರದ್ದುಗೊಳಿಸಬೇಕು ಎಂಬುದಷ್ಟೇ ತಮ್ಮ ಒತ್ತಾಯ ಎಂದರು.

ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಮುಂದಿನ ಪೀಠಾಧಿಪತಿ ಆಯ್ಕೆಯಾಗಬೇಕು, ಟ್ರಸ್ಟ್‌ ಡೀಡ್ ರದ್ದಾಗಬೇಕು, ಮಠದ ಭಕ್ತರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಹಾಗೂ ಹಾಳಾಗಿರುವ ಶಾಲಾ – ಕಾಲೇಜುಗಳನ್ನು ಸರಿಪಡಿಸಬೇಕು ಎಂಬುದೇ ಭಕ್ತರ ಒತ್ತಾಯವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್, ಮುಖಂಡರಾದ ಆನಗೋಡು ನಂಜುಂಡಪ್ಪ, ಶಿವಮೊಗ್ಗ ಓಂಕಾರಪ್ಪ, ಡಿ.ಸಿ. ರಾಜಪ್ಪ, ಶಿವಮೊಗ್ಗ ಬೆನಕಪ್ಪ, ಕೆ.ಸಿದ್ದಪ್ಪ, ಜಿ.ಬಿ. ವೆಂಕಟೇಶ್ ಜಕ್ಕಲಿ, ಕಾಂತೇಶ್, ಬಸವನಗೌಡ್ರು, ಲಿಂಗರಾಜು ಆವರಗೆರೆ, ಶ್ರೀನಿವಾಸ ಮೆಳ್ಳೇಕಟ್ಟೆ, ಚೇತನ್ ಎಲೆಬೇತೂರು, ನಾಗರಾಜ್ ಪಲ್ಲಾಗಟ್ಟೆ, ಬಸವಲಿಂಗಪ್ಪ ಕಲಪನಹಳ್ಳಿ, ಸಂತೋಷ್ ಮೆಳ್ಳೇಕಟ್ಟೆ, ಟಿ.ಎಂ. ಶಿವಮೂರ್ತಯ್ಯ ಹಿರೇಮೇಗಳಗೆರೆ, ವಿಶ್ವನಾಥ್ ಮಂಡಲೂರು ಮತ್ತಿತರರು ಉಪಸ್ಥಿತರಿದ್ದರು.

error: Content is protected !!