ಸಿಎಂ ಸಿದ್ದು ಶಕ್ತಿ ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ: ಶಾಸಕ ಶಾಂತನಗೌಡ
ಹೊನ್ನಾಳಿ, ಆ. 6- ಮುಡಾ ಹಗರಣ ಸಿದ್ದರಾಮಯ್ಯ ಅವರ ಕಾಲದಲ್ಲಿ ನಡೆದಿಲ್ಲ. ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಪ್ರಕರಣ. ಎಲ್ಲರಂತೆಯೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ ನಿವೇಶನ ಹಂಚಿಕೆಯಾಗಿದ್ದು, ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನೂ ಇಲ್ಲ. ಆದರೂ ಸಹ ಕಳಂಕ ರಹಿತ ರಾಜಕಾರಣಿ ಸಿದ್ದರಾಮಯ್ಯ ವಿರುದ್ದ ವಿಪಕ್ಷಗಳು ಹಾಗೂ ಕೇಂದ್ರ ಸರ್ಕಾರ ಇಲ್ಲಸಲ್ಲದ ಷಡ್ಯಂತ್ರ ನಡೆಸುತ್ತಿವೆ. ಸಿದ್ದು ಅವರ ಶಕ್ತಿಯನ್ನಾಗಲೀ, ಪ್ರಭಾವವನ್ನಾಗಲೀ ಕುಗ್ಗಿಸಲು ಮೋದಿಗಾಗಲೀ, ರಾಜ್ಯ ಬಿಜೆಪಿಗಾಗಲೀ ಸಾಧ್ಯವಿಲ್ಲ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಹೊನ್ನಾಳಿಯಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗ, ಅಹಿಂದ ಮತ್ತು ಶೋಷಿತ ವರ್ಗಗಳ ಒಕ್ಕೂಟಗಳು ಇಂದು ನೀಡಿದ್ದ `ಹೊನ್ನಾಳಿ ಬಂದ್’ ಕರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಕ್ತಿಯೊಬ್ಬ ನೀಡಿದ ದೂರು ಆಧರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೀಡಿರುವ ಶೋಕಾಸ್ ನೋಟಿಸನ್ನು ರಾಜ್ಯಪಾಲರು ಕೂಡಲೇ ಹಿಂಪಡೆಯಬೇಕು. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಅನಗತ್ಯ ಆರೋಪ ಸಲ್ಲದು ಎಂದರು.
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಶೋಷಿತ ಸಮುದಾಯಗಳ, ಆಹಿಂದ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಗೂ ಹೊನ್ನಾಳಿ ಬಂದ್ ಯಶಸ್ವಿಯಾಗಿದೆ.ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕರು ಎಚ್ಚರಿಸಿದರು.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಬಂಧನ, ಜಾರ್ಖಂಡ್ ಹೇಮಂತ್ ಸೂರೇನ್ ಅವರ ವಿರುದ್ಧವೂ ಕೂಡ ಸುಳ್ಳು ಆರೋಪಗಳ ಮೂಲಕ ಜೈಲಿಗೆ ಕಳಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.
ನಂತರ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ನೆಲಹೊನ್ನೆ ಮೋಹನ್ ಮಾತನಾಡಿ, ರಾಜ್ಯದಲ್ಲಿ ಒಬ್ಬ ಹಿಂದುಳಿದ ವರ್ಗದ ವ್ಯಕ್ತಿ ಮುಖ್ಯಮಂತ್ರಿಯಾಗಿ ಅತ್ಯಂತ ಪ್ರಾಮಾಣಿಕ, ಯಶಸ್ವಿಯಾಗಿ ಆಡಳಿತ ಮಾಡಿಕೊಂಡು ಬರುತ್ತಿರುವ ಸಿದ್ದರಾಮಯ್ಯ ಅವರನ್ನು ಸಹಿಸದೇ ಷಡ್ಯಂತ್ರ ಮಾಡುತ್ತಿರುವುದು ಖಂಡನೀಯ ಎಂದರು.
ಪ್ರತಿಭಟನೆಯ ನಂತರ ಪಟ್ಟಣದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಉಪ ವಿಭಾಗಾಧಿಕಾರಿ
ವಿ.ಅಭಿಷೇಕ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ತಹಶೀಲ್ದಾರ್ ಪಟ್ಟರಾಜಗೌಡ, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ್, ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ, ಪಿ.ಐ.ಸುನಿಲ್ ಕುಮಾರ್, ಕುರುಬ ಸಮಾಜದ ಉಪಾಧ್ಯಕ್ಷ ಕೆ.ಪುಟ್ಟಪ್ಪ, ಖಜಾಂಚಿ ಎಚ್.ಎ. ನರಸಿಂಹಪ್ಪ, ಹೆಚ್.ಎ. ಉಮಾಪತಿ, ಅಲ್ಪಸಂಖ್ಯಾತ ಸಮುದಾಯ ಅಧ್ಯಕ್ಷ ಚೀಲೂರು ವಾಜೀದ್, ಸಾಸ್ವೆಹಳ್ಳಿ ಅಬ್ದುಲ್ ಜಬ್ಬಾರ್ ಖಾನ್, ಬಂಜಾರ ಸಮಾಜದ ಅಧ್ಯಕ್ಷ ಅಂಜುನಾಯ್ಕ, ಹಾಲುಮತ ಸಮುದಾಯದ ರಾಜು ಕಣಗಣ್ಣಾರ, ಬೇಲಿಮಲ್ಲೂರು ನರಸಪ್ಪ, ದಿಡಗೂರು ಜಿ.ಎಚ್.ತಮ್ಮಣ್ಣ, ಅರಕೆರೆ ಮಧುಗೌಡ, ಕುಂಬಳೂರು ವಾಗೀಶ್, ಎ.ಡಿ.ಈಶ್ವರಪ್ಪ, ಬೆನಕನಹಳ್ಳಿ ವೀರಣ್ಣ, ಕೆಂಗಲಹಳ್ಳಿ ಪ್ರಭಾಕರ್, ಉಪ್ಪಾರ ಸಮಾಜದ ಅಧ್ಯಕ್ಷ ಷಣ್ಮುಖಪ್ಪ, ಆರ್.ನಾಗಪ್ಪ, ಎಚ್.ಬಿ.ಅಣ್ಣಪ್ಪ ಸೇರಿದಂತೆ, ನೂರಾರು ಜನ ಅಹಿಂದ ಒಕ್ಕೂಟದ ಮುಖಂಡರು ಇದ್ದರು.
ಹೊನ್ನಾಳಿ ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು.