ದಾವಣಗೆರೆ, ಮೇ 5 – ನನ್ನ ಗ್ಯಾರಂಟಿ ಅಭಿವೃದ್ಧಿ, ಬಡ ಕುಟುಂಬ, ಹಳ್ಳಿ ಪ್ರದೇಶದಿಂದ ಬಂದಂತಹ ನನಗೆ ಬಡವರು, ಹಸಿವಿನ ನೋವು ಗೊತ್ತು. ಜನಸೇವೆ ಮಾಡಬೇಕೆಂದು ತುಂಬಾನೇ ಕಷ್ಟಪಟ್ಟು ಚುನಾವಣಾ ಕಣದಲ್ಲಿದ್ದೇನೆ. ಅಭಿವೃದ್ಧಿಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕೆಂಬ ಅಪೇಕ್ಷೆಯಿಂದ ಬಂದಿದ್ದೇನೆ. ಪ್ರಯತ್ನದಲ್ಲಿ ಯಶಸ್ವಿಯಾಗುತ್ತೇನೆ ಎಂಬ ನಂಬಿಕೆ ಇದೆ. ಸಮೀಕ್ಷೆಗಳಲ್ಲಿ ಗೆಲುವು ನನ್ನ ಪರವಿದೆ ಎಂಬುದು ಗೊತ್ತಾಗುತ್ತಿದ್ದಂತೆ ನನ್ನನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ನಗರದ ವಿವಿಧೆಡೆ ಮತಯಾಚನೆ ಮಾಡಿದ ಬಳಿಕ ಮಾತನಾಡಿದ ಅವರು, ರಾಜಕಾರಣದಲ್ಲಿ ಇನ್ನೂ 30 ರಿಂದ 35 ವರ್ಷಗಳ ಕಾಲ ಸೇವೆ ಮಾಡಬೇಕೆಂದುಕೊಂಡಿದ್ದೇನೆ ಎಂದು ಹೇಳಿದರು.
ಎಲ್ಲಾ ಕಡೆ ಹೊಸ ನಾಯಕತ್ವ ಬರಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದೇನೆ. ಈಗಲೂ ದಾವಣಗೆರೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿಯೂ ಅಸಮಾನತೆ ತಾಂಡವವಾಡುತ್ತಿದೆ. ಎರಡೇ ಕುಟುಂಬಗಳಿಗೆ ಅಧಿಕಾರ ಸೀಮಿತವಾದರೆ ಪ್ರಜಾಪ್ರಭುತ್ವ, ಅಭಿವೃದ್ಧಿಗೂ ಒಳ್ಳೆಯದಲ್ಲ. ನನ್ನ ಹೋರಾಟ ಜನರಿಗೋಸ್ಕರ ಎಂದು ತಿಳಿಸಿದರು.