ನಾನು ರಾಜಕಾರಣದಲ್ಲಿ ಮುನ್ನೆಲೆಗೆ ಬಂದ ಮೇಲೆ ಆಕಾಂಕ್ಷಿಗಳು ನಮ್ಮ ಪಕ್ಷದಲ್ಲಿ ಹೆಚ್ಚಾಗಿದ್ದಾರೆ. ನನಗೆ ಯಾವುದೇ ಅಡೆ-ತಡೆ ಬಂದಿಲ್ಲ. ನನಗೆ ಪಕ್ಷದ ಮುಖಂಡರು ಮತ್ತು ಜನರು ಸಹಕಾರ ನೀಡುತ್ತಿದ್ದಾರೆ. ಶಿಕ್ಷಣ ಮತ್ತು ಹೋರಾಟ ಎರಡೂ ನನಗೆ ಯಶಸ್ಸು ತಂದುಕೊಟ್ಟಿವೆ.
ಜಿ.ಬಿ. ವಿನಯ್ ಕುಮಾರ್
ಚನ್ನಗಿರಿ, ಜ.14- ಪರಿಶ್ರಮ ಮತ್ತು ಕಾಯಕದ ಮೇಲೆ ದೃಢವಾದ ನಂಬಿಕೆ ನನ್ನದು. ಅಂಬೇಡ್ಕರ್ ಆಶಯದಂತೆ ಶಿಕ್ಷಣ, ಸಂಘರ್ಷ, ಹೋರಾಟ ನನ್ನ ಧ್ಯೇಯ ಎಂದು ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕರೂ, ನಿರ್ದೇಶಕರೂ ಆದ ಜಿ.ಬಿ.ವಿನಯ್ ಕುಮಾರ್ ಕಕ್ಕರಗೊಳ್ಳ ಹೇಳಿದರು.
ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ, ಕಾಕನೂರು, ಸಂತೇಬೆನ್ನೂರು ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ನಂತರ ಸಂತೇಬೆನ್ನೂರು ಬಸ್ ನಿಲ್ದಾಣದಲ್ಲಿ ವಿನಯ್ ಕುಮಾರ್ ಅಭಿಮಾನಿ ಬಳಗದಿಂದ ಆಯೋಜನೆಗೊಂ ಡಿದ್ದ ಇನ್‌ಸೈಟ್ಸ್ ಸಂಸ್ಥೆಯ ದಶಮಾನೋತ್ಸವ ಸಮಾ ರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸುತ್ತೇನೆಯೇ ಹೊರತು ಪಕ್ಷೇತರರಾಗಿ ಸ್ಪರ್ಧಿಸುವುದಿಲ್ಲ, ಇದು ನನ್ನ ದೃಢ ನಿಲುವು ಎಂದರು.
ಬರಗಾಲದಿಂದ ತತ್ತರಿಸಿರುವ ರೈತರು ಮತ್ತು ಜನರ ಸ್ಥಿತಿ-ಗತಿಗಳನ್ನು ನೋಡಿದ್ದೇನೆ, ಇಂದು ಜನರು ದೇವರ ಮೊರೆಹೋಗುತ್ತಿರುವುದು ಕಾಣುತ್ತಿದೆ. ಹಾಲಿ ಸಂಸದರು ಬರಗಾಲ ಪರಿಸ್ಥಿತಿಯಲ್ಲಿಯೂ ಜನರ ಬಳಿ ಬಂದಿಲ್ಲ, ಜನರ ಸಮಸ್ಯೆ ಆಲಿಸಿಲ್ಲ ಎಂಬ ಮಾತು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಚುನಾವಣೆ ಬಂದಾಗ ಮಾತ್ರ ಪ್ರಜಾಪ್ರಭುತ್ವ, ಚುನಾವಣೆ ಮುಗಿದಾಗ ಜನರ ಸಮಸ್ಯೆಗಳಿಗೆ ಪ್ರಜಾಪ್ರಭುತ್ವ ಇರುವುದಿಲ್ಲ. ದುಡ್ಡಿನ ಜನರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೈಯಲ್ಲಿ ಹಿಡಿಯಲು ಹಂಬಲಿಸುತ್ತಿದ್ದಾರೆ. ಇದಕ್ಕೆ ಜನರು ಪ್ರಜ್ಞಾವಂತರಾಗಬೇಕು ಎಂದು ಹೇಳಿದರು.
ಗ್ರಾಮದ ಕಾಂಗ್ರೆಸ್ ಮುಖಂಡ ಎಂ.ಸಿದ್ದಪ್ಪ ಮಾತನಾಡಿ, ವಿನಯ್ ಕುಮಾರ್ ಅವರು ಜಗಳೂರು, ಹರಪನಹಳ್ಳಿ, ಹೊನ್ನಾಳಿ ತಾಲ್ಲೂಕು ಗಳಲ್ಲಿ 540 ಕಿಮಿ ಪಾದಯಾತ್ರೆ ಮಾಡಿ ಜನರ ಸಮಸ್ಯೆ ಆಲಿಸಿ, ಕಟ್ಟಕಡೆಯ ವ್ಯಕ್ತಿಯನ್ನೂ ಭೇಟಿ ಮಾಡಿದ್ದಾರೆ ಎಂದರು.
ಗ್ರಾಮದ ಉಮೇಶ್ ಮಾತನಾಡಿದರು. ಇನ್‌ಸೈಟ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್. ಶರತ್ ಕುಮಾರ್, ಇರ್ಫಾನ್, ಗೌಡ್ರುಸ್ವಾಮಿ, ಶೇರ್‌ಅಲಿ, ವಿಜಯ್ ಗುಜ್ಜರ್, ಬಾಲು, ರಘು ದೊಡ್ಮನಿ, ಸದ್ದಾಂ, ವಿಜಯ್, ಗೌರೀಪುರ ನಾಗರಾಜ್, ನಯಾಜ್, ರುದ್ರೇಶ್ ಇದ್ದರು.