ಸ್ವರಾಜ್ಯವು `ಸು ರಾಜ್ಯ’ವಾದಲ್ಲಿ ಸಾರ್ಥಕ

ಸ್ವರಾಜ್ಯವು `ಸು ರಾಜ್ಯ’ವಾದಲ್ಲಿ ಸಾರ್ಥಕ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕವಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ

ದಾವಣಗೆರೆ, ಆ.28- ಸ್ವತಂತ್ರ ಭಾರತವು ತನ್ನದೇ ಸಂವಿಧಾನ ರಚಿಸಿಕೊಂಡು ಸ್ವರಾಜ್ಯವೇನೋ ಆಯಿತು. ಆದರೆ, 76 ವರ್ಷಗಳು ಕಳೆದರೂ ಪೂರ್ಣ `ಸು ರಾಜ್ಯ’ವಾಗಲು ಇನ್ನೂ ಸಾಧ್ಯವಾಗಿಲ್ಲ ಎಂದು ಹಿರಿಯ  ಪತ್ರಕರ್ತ ಹೆಚ್.ಬಿ. ಮಂಜುನಾಥ್ ವ್ಯಾಕುಲತೆ ವ್ಯಕ್ತಪಡಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಸಮಿತಿಯ ವತಿಯಿಂದ ರಾಜ್ಯಮಟ್ಟದ ಕವಿಗೋಷ್ಠಿ ಆಯ್ಕೆಗಾಗಿ  `ಸ್ವರಾಜ್ಯ- ಸುರಾಜ್ಯ’ ವಿಷಯ ವಾಗಿ ಕವನ ವಾಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರಜೆಗಳು ತಮ್ಮ ಹಕ್ಕುಗಳಿಗೆ ಕೊಟ್ಟಷ್ಟೆ ಪ್ರಾಮುಖ್ಯತೆಯನ್ನು ತಮ್ಮ ಕರ್ತವ್ಯಗಳಿಗೂ ಕೊಟ್ಟಾಗ ಮಾತ್ರ ಸುರಾಜ್ಯವಾಗಲು ಸಾಧ್ಯ, ಭ್ರಷ್ಟಾಚಾರ ಎಂಬುದು ಸು ರಾಜ್ಯ ಪರಿಕಲ್ಪನೆಗೆ ಕಡು ವೈರಿ ಇದ್ದಂತೆ ಎಂದರಲ್ಲದೇ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಹಾಗೂ ಅದರಲ್ಲಿ ದಾವಣಗೆರೆಯ ಪಾತ್ರದ ಅನೇಕ ಮಹತ್ತರ ಘಟ್ಟಗಳನ್ನು ಮಾತಿನಲ್ಲಿ ಚಿತ್ರಿಸಿದರು.

ಭಾರತವೀಗ ವಿಶ್ವದ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು, ಆಂತರಿಕವಾಗಿ ಸುರಾಜ್ಯ ವಾಗಲು ಪ್ರತಿ ಪ್ರಜೆಯೂ ತಮ್ಮ ಪಾತ್ರ ಹಾಗೂ ಕರ್ತವ್ಯದ ಬಗ್ಗೆ ಅರಿತು ನಡೆಯಬೇಕಿದೆ ಎಂದರು.

ಕವಿಗೋಷ್ಟಿಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಹಿರಿಯ ಕವಿ – ಲೇಖಕ ಮಹಾಂತೇಶ ನಿಟ್ಟೂರು ಅವರು, ಕವನ ರಚಿಸಬೇಕೆಂದೇ ತೊಡಗಿದಾಗ ಬಾರದ ಅನೇಕ ಉತ್ತಮ ರಚನೆಯು ಸಾಂದರ್ಭಿಕವಾಗಿ ತಕ್ಷಣ ರಚಿಸಿದಾಗ ಬರುವುದುಂಟು. ವಿಶ್ವ ಭ್ರಾತೃತ್ವ ಹೇಳಿರುವ ಭಾರತ ತನ್ನ ವಿವಿಧತೆಯಲ್ಲಿ ಏಕತೆಯನ್ನು ಬರೀ ಮಾತಾಗಿಸದೇ  ಸಾಧಿಸಿರುವುದು ವಿಶ್ವದ ಅದ್ಭುತದಂತಿದೆ. ವಿಶ್ವಗುರು ಎಂದು ನಮ್ಮ ಬಗ್ಗೆ ನಾವು ಹೇಳುವುದಕ್ಕಿಂತ ಬೇರೆ ಬೇರೆ ದೇಶಗಳೇ ಹೇಳುತ್ತಿರುವುದು ನಿಜ ವಾಗಿಯೂ ಹೆಮ್ಮೆಯ ವಿಷಯ ಎಂದರು. ಜಾತಿ ಮತಗಳ ಆಧಾರಿತ ಸ್ಥಾನಮಾನ ಗಳನ್ನು ನೀಡುವುದಕ್ಕಿಂತ ಪ್ರಾಮಾಣಿಕತೆ ಅರ್ಹತೆ ಆಧಾರವಾಗಿ ನೀಡುವುದು ಸುರಾಜ್ಯ ಸಾಕಾರಕ್ಕೆ ಅವಶ್ಯ ಎಂದರು.

ಹಿರಿಯ ಸಾಹಿತಿ ಸುನೀತಾ ಪ್ರಕಾಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ ಸಹನಾ ಮಂಜುನಾಥ್ ಹಾಡಿದರು. ಪ್ರಶಾಂತ್ ಆಶಯ ನುಡಿಗಳನ್ನು ವ್ಯಕ್ತಪಡಿಸಿದರು.

ಕವಯತ್ರಿ ಶ್ರೀಮತಿ ವೀಣಾ ಕೃಷ್ಣಮೂರ್ತಿ,    ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ಕೋಲ್ಕುಂಟೆ, ಘಟಕ ಸಂಚಾಲಕ ಕೆ.ಪಿ. ಅಣಬೇರು ತಾರೇಶ್, ಹರಿಹರ ತಾಲ್ಲೂಕು ಸಂಚಾಲಕ ಸುನೀಲ್, ಎಸ್.ಮಂಜುನಾಥ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

ಸಮಿತಿಯ ಜಿಲ್ಲಾ ಸಹ ಸಂಯೋಜಕ ಕೆ.ಎಂ. ಅಮರೇಶ್ ವಂದಿಸಿದರು. ನಗರದ ರಾಘವೇಂದ್ರ ಪಿಯು ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು.

error: Content is protected !!