ದಾವಣಗೆರೆ, ಏ. 18 – ಉತ್ತರ ವಿಧಾನಸಭಾ ಕ್ಷೇತ್ರದ ಜನರ ಸೇವೆಯ ಅವಕಾಶ ಬಯಸಿ ಈ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಾಗರಾಜ್ ಲೋಕಿಕೆರೆ ಅವರು ತಮಗೆ ಜನ ಆಶೀರ್ವಾದ ಸಿಗಲೆಂದು ನಗರ ದೇವತೆಯ ಕೃಪಾಶೀರ್ವಾದ ಪಡೆದರು.
ಇಂದು ಮುಂಜಾನೆ ನಾಗರಾಜ್ ಲೋಕಿಕೆರೆ ದಂಪತಿ ಶಕ್ತಿ ದೇವತೆಯಾಗಿರುವ ನಗರ ದೇವತೆ ಶ್ರೀ ದುರ್ಗಾಂಬಿಕ ದೇವಿಯ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ತಾಯಿಯ ಸನ್ನಿಧಿಯ ಗರ್ಭಗುಡಿಯಲ್ಲಿ ನಾಗರಾಜ್ ಲೋಕಿಕೆರೆ ಅವರು ಧರ್ಮಪತ್ನಿ ಶ್ರೀಮತಿ ಲತಾ ನಾಗರಾಜ್ ಲೋಕಿಕೆರೆ ಜೊತೆಗೂಡಿ ದೇವಿಯ ಮೂರ್ತಿಗೆ ಸ್ವತಃ ಅಭಿಷೇಕ ನೆರವೇರಿಸಿದರು. ಅಲ್ಲದೇ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಮೆರೆದು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಕಂಡು ಜನರ ಸೇವೆಯ ಅವಕಾಶ ನೀಡುವಂತೆ ಕೃಪಾಶೀರ್ವಾದ ಬೇಡಿದರು. ಈ ಸಂದರ್ಭದಲ್ಲಿ ನಾಗರಾಜ್ ಲೋಕಿಕೆರೆ ಆಪ್ತರಾದ ಜಿ.ಎಸ್. ಪರಶುರಾಮ್, ಆಪ್ತ ಸಹಾಯಕ ವಿನಯ್ ಇದ್ದರು.