ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ ತಡೆಗೆ ಎಸ್‌ಎಫ್‌ಐ ಆಗ್ರಹ

ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ ತಡೆಗೆ ಎಸ್‌ಎಫ್‌ಐ ಆಗ್ರಹ

ಹರಪನಹಳ್ಳಿ, ಮೇ 26 – ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‍ಎಫ್‍ಐ) ತಾಲ್ಲೂಕು ಸಮಿತಿ ಕಾರ್ಯಕರ್ತರು ಇಂದು ಇಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ನಂತರ ಮಾತನಾಡಿದ ಎಸ್‍ಎಫ್‍ಐ ತಾಲ್ಲೂಕು ಕಾರ್ಯದರ್ಶಿ ವೆಂಕಟೇಶ್ ಅವರು ರಾಜ್ಯದ ಹಿಂದುಳಿದ ತಾಲ್ಲೂಕುಗಳಲ್ಲಿ ಹರಪನಹಳ್ಳಿ ತಾಲ್ಲೂಕು ಸಹ ಒಂದಾಗಿದ್ದು, ಇಲ್ಲಿ ಬಡವರು, ಎಸ್ಸಿ, ಎಸ್ಟಿ ಹಿಂದುಳಿದ ಸಮುದಾಯಗಳ ಮಕ್ಕಳೇ  ಹೆಚ್ಚಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿಯಿಂದ ಮಕ್ಕಳ ಕಾಲೇಜ್ ಪ್ರವೇಶಾತಿಗಾಗಿ ಪೋಷಕರು ಪರದಾಡುವಂತಾಗಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.   

ಪಟ್ಟಣದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿ ಮನಸೋಇಚ್ಛೆ ವಿದ್ಯಾರ್ಥಿ ಗಳಿಂದ ಡೊನೇಷನ್ ವಸೂಲಿ ಮಾಡುತ್ತಿ ರುವುದನ್ನು ಎಸ್‍ಎಫ್‍ಐ ಸಂಘಟನೆ ಖಂಡಿ ಸುತ್ತದೆ ಎಂದ ಅವರು, ಇಷ್ಟೇಲ್ಲಾ ಡೊನೇ ಷನ್ ವಸೂಲಿ ಆಗುತ್ತಿರುವುದನ್ನು ಕಂಡು ಕಾಣದ ರೀತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಕಣ್ಣು ಮುಚ್ಚಿ ಕುಳಿತಿರುವುದು ವಿಷಾದನೀಯ ಎಂದರು. 1986 ರ ಶಿಕ್ಷಣ ಹಕ್ಕು ಖಾಯ್ದೆಯ ಪ್ರಕಾರ ಪ್ರತಿಯೊಂದು ಜಿಲ್ಲೆಯಲ್ಲಿ ಮತ್ತು ತಾಲ್ಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ  ಡೊನೇಷನ್ ನಿಯಂತ್ರಣಕ್ಕಾಗಿ ಡೇರಾ ಸಮಿತಿಗ ಳು ಅಸ್ತಿತ್ವದಲ್ಲಿರಬೇಕು. ಈ ಸಮಿತಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿದ್ಯಾರ್ಥಿ ಸಂಘಟನೆಗಳು, ಪೋಷಕರು ಸದಸ್ಯರಾಗಿರತ್ತಕ್ಕದ್ದು, ಜತೆಗೆ ಈ ಸಮಿತಿಯು ಕಾಲ ಕಾಲಕ್ಕೆ ನಿಯಮಿತವಾಗಿ ಸಭೆಗಳನ್ನು ನಡೆಸಿ ಕಾನೂನು ಉಲ್ಲಂಘಿಸಿ ಡೊನೇಷನ್ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿತ್ತು.

ಅದರೆ ಡೇರಾ ಸಮಿತಿಯು ನಮ್ಮ ಹರಪನಹಳ್ಳಿ ತಾಲ್ಲೂಕಿನಲ್ಲಿ ಹೆಸರಿಗಷ್ಟೇ ಇದ್ದು, ಇದು ಯಾವುದೇ ರೀತಿ ಸಕ್ರಿಯವಾದಂತ ಪಾತ್ರವನ್ನು ನಿರ್ವಹಿಸುತ್ತಿಲ್ಲ. ಆದ್ದರಿಂದ ಈ ಕೂಡಲೇ ಈ ಡೇರಾ ಸಮಿತಿ ಸಭೆಯನ್ನು ಕರೆಯಬೇಕು. ಈ ಸಭೆಗೆ ಎಲ್ಲಾ ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಗಳನ್ನು ವಿದ್ಯಾರ್ಥಿ ಸಂಘಟನೆಗಳನ್ನು ಶಿಕ್ಷಣ ತಜ್ಞರನ್ನು ಕರೆದು ಡೊನೇಶನ್ ಹಾವಳಿ ನಿಯಂತ್ರಿಸಬೇಕೆಂದು ಒತ್ತಾಯಿಸಿದರು. 

ಈ ವೇಳೆ ಸಂಜುನಾಯ್ಕ್, ಸಿ.ಮುಶ್ರಫ್, ಮಹಾಂತೇಶ್, ಸುದೀಪ್ ಚೇತನ್, ಚವ್ಹಾಣ್, ಕೃಷ್ಣನಾಯ್ಕ್ ಸೇರಿದಂತೆ ಇತರರಿದ್ದರು.