ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಕನ್ನಡ ಬೆಳೆಸಿ

ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಕನ್ನಡ ಬೆಳೆಸಿ

ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಹರಪನಹಳ್ಳಿ ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್ ಕರೆ

ಹರಪನಹಳ್ಳಿ, ಮೇ 5 – ಪ್ರಾಥಮಿಕ ಹಂತದಿಂದ  ಉನ್ನತ ಶಿಕ್ಷಣದವರೆಗೆ ಕನ್ನಡ ಭಾಷೆಯನ್ನು ಬೆಳೆಸಬೇಕು. ಕನ್ನಡ ಕೇವಲ ಸಂಗೀತ, ಸಾಂಸ್ಕೃತಿಕ ಹಾಗೂ ಸಮ್ಮೇಳನ ದಂತಹ ಕಾರ್ಯಕ್ರಮಗಳಿಗೆ ಸೀಮಿತವಾಗ ಬಾರದು ಎಂದು ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್ ಹೇಳಿದರು.

ಪಟ್ಟಣದ ತೆಗ್ಗಿನಮಠ ಸಂಸ್ಥೆಯ ಕಟ್ಟಿ ಸೇತುರಾಮಚಾರ್ಯ ಶಿಕ್ಷಣ ಮಹಾವಿ ದ್ಯಾಲಯದಲ್ಲಿ ಇಂದು ಏರ್ಪಾಡಾಗಿದ್ದ ಕನ್ನಡ ಸಾಹಿತ್ಯ ಪರಿಷತ್‍ನ 108ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಸರ್ವತೋಮುಖವಾಗಿ ಕನ್ನಡವನ್ನು ಬೆಳೆಸಬೇಕಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಪೋಷಕರು ತಮ್ಮ ಮಕ್ಕಳಲ್ಲಿ ಕನ್ನಡ ಭಾಷೆಯ ಜ್ಞಾನವನ್ನು ಬೆಳೆಸಬೇಕಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ ಮಾತನಾಡಿ, ಜಾಗತೀಕರಣದ ಪ್ರಭಾವ ದಿಂದ ಅನೇಕ ಭಾಷೆಗಳು, ಕನ್ನಡ ಶಾಲೆಗಳು ಮುಚ್ಚುವ ಅಪಾಯ ಎದುರಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಭಾಷೆ, ನೆಲ, ಜಲ ಪ್ರೀತಿಸಿ ಅವುಗಳನ್ನು ಉಳಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.

ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ ಕುರಿತು ಪ್ರೊ. ಹೆಚ್.ಕೊಟ್ರೇಶ್ ಹಾಗೂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಎಂ.ರಾಜಶೇಖರ್ ಮಾತನಾಡಿ, ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದ್ದು ಸಾಹಿತ್ಯ, ಸಾಂಸ್ಕೃತಿಕ, ಉಡುಗೆ, ತೊಡುಗೆಯಲ್ಲಿ ಜಗತ್ತಿನಲ್ಲಿಯೇ ಪ್ರಸಿದ್ಧಿ ಪಡೆದಿದೆ. ಭಾರತೀಯ ಮೂಲನಿವಾಸಿ ದ್ರಾವಿಡರಾದ ನಾವುಗಳು ಭಾಷೆ, ನಾಡು, ನುಡಿ ಸಂಸ್ಕೃತಿಯ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದೇವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾತೃಬಾಷೆ ತಾಯಿಯ ತೊದಲು ನುಡಿ ಕನ್ನಡ ಭಾಷೆ ಮಾತನಾಡುತ್ತೇವೆ. ಕನ್ನಡದ ಬಗ್ಗೆ ನಮಗೆ ಗೌರವ, ಪ್ರೀತಿ, ಅಭಿಮಾನವಿರಬೇಕು. ಇತರೆ ಭಾಷೆಗಳನ್ನು ಕಲಿತು ಜಾಣರಾಗಬೇಕು. ಸರ್ಕಾರಿ ಉದ್ಯೋಗ ಸೇರಿದಂತೆ ವಿವಿಧ ರಂಗಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು.  ಮಕ್ಕಳು ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳನ್ನು ಮತ್ತು ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ 100ಕ್ಕೆ 100 ರಷ್ಟು ಫಲಿತಾಂಶ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಟಿಎಂಎಇ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಪ್ರಗತಿ ಪರ ಕೃಷಿಕ ಆಲದಹಳ್ಳಿ ಷಣ್ಮುಖಪ್ಪ, ಸಾಹಿತಿ ಕೆ.ಎಸ್.ವೀರಭದ್ರಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಉದ್ಯೋಗಗಳನ್ನು ನಂಬಿ ಜೀವನ ವ್ಯರ್ಥ ಮಾಡಿಕೊಳ್ಳುವ ಬದಲು, ಅಧುನಿಕ ಕೃಷಿ ವ್ಯವಹಾರ ಸೇರಿದಂತೆ, ಅನೇಕ ವೈಯಕ್ತಿಕ ವ್ಯವಹಾರ ಮಾಡಿ ಜೀವನ ರೂಪಿಸಿಕೊಳ್ಳುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ, ಬೆಳಸುವ ಅಗತ್ಯತೆ ಇದೆ ಎಂದರು.

ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳಾದ ಆರ್.ಪದ್ಮರಾಜ್ ಜೈನ್, ಜಿ. ಮಹಾದೇವಪ್ಪ, ಕಾರ್ಯಕಾರಿ ಮಂಡಳಿಯ ನಿರ್ದೆಶಕರುಗಳಾದ ಪಿ. ಕರಿಬಸಪ್ಪ, ಎಸ್.ಮಕ್ಬೂಲ್ ಭಾಷ, ಬಿ.ಎಂ. ನಾಗರಾಜ, ಮುಖಂಡರುಗಳಾದ ಬಸವರಾಜ ಭಂಡಾರಿ, ಇಸ್ಮಾಯಿಲ್‌ ಎಲಿಗಾರ್, ಉಪನ್ಯಾಸಕರುಗಳಾದ  ಟಿ.ಹೆಚ್. ಗಿರೀಶ್, ಸಂತೋಷ್, ಕೆ.ಎಂ.ಲತಾ ಉಪಸ್ಥಿತರಿದ್ದರು.