ರೈತರಿಂದಲೇ ರಾಗಿ ಖರೀದಿಸುವಂತೆ ಸೂಚನೆ

ರೈತರಿಂದಲೇ ರಾಗಿ ಖರೀದಿಸುವಂತೆ ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ 

ದಾವಣಗೆರೆ, ಮೇ 4- ಬೆಂಬಲ ಬೆಲೆಯಲ್ಲಿ ಸರ್ಕಾರದಿಂದ ರಾಗಿ ಖರೀದಿಸುತ್ತಿದ್ದು ನೈಜ ರೈತರಿಂದ ರಾಗಿ ಖರೀದಿಸಿ ದಲ್ಲಾಳಿಗಳು, ಮಧ್ಯವರ್ತಿಗಳು, ವ್ಯಾಪಾರಸ್ಥರನ್ನು ದೂರವಿಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾ ಶಂಕರ್ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಕೋವಿಡ್ ಪರಿಸ್ಥಿತಿ ಪರಿಶೀಲನೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರೂಟ್ಸ್ ತಂತ್ರಾಂಶದಲ್ಲಿ ಎಲ್ಲ ರೈತರು ನೋಂದಣಿ ಮಾಡಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದರು.

 ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ವಿಶೇಷ ಡ್ರೈವ್ ಮಾಡುವ ಮೂಲಕ ರೈತರಿಗೆ ಇದರಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ರೈತರಿಗೆ ಗೊಬ್ಬರ, ಬೀಜ, ಇನ್‍ಪುಟ್ ಸಬ್ಸಿಡಿ, ಮಾಹಿತಿ ಎಲ್ಲವೂ ಪ್ರೂಟ್ಸ್ ತಂತ್ರಾಂಶದ ಮೂಲಕವೇ ರೈತರಿಗೆ ಸಿಗಲಿವೆ. ಹಾಗಾಗಿ ಪ್ರೂಟ್ ತಂತ್ರಾಂಶದ ಬಗ್ಗೆ ಉಪವಿಭಾಗಾಧಿಕಾರಿಗಳು ಗಮನಹರಿಸಿ ಮತ್ತು ಕುಡಿಯುವ ನೀರಿನ ಬಗೆಗೆ ಒಂದು ವಾರದೊಳಗೆ ಸರ್ವೆ ಮಾಡಿ ಮಾಹಿತಿ ನೀಡಲು  ಸೂಚಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯವ ನೀರಿನ ಸಮಸ್ಯೆ ಇಲ್ಲ. ಯಾವುದೇ ಖಾಸಗಿ ಬೋರ್‍ವೆಲ್‍ಗಳನ್ನು ತೆಗೆದುಕೊಂಡಿಲ್ಲ. ಒಂದು ವೇಳೆ ಮಳೆ ತಡವಾದರೆ ಸಮಸ್ಯಾತ್ಮಕ ಹಳ್ಳಿಗಳ  ಪಟ್ಟಿಯನ್ನು ಜಿ.ಪಂ ಸಿಇಒ ಸಿದ್ದಪಡಿಸಿಕೊಂಡಿದ್ದು, ಅದರಂತೆ ಸಮಸ್ಯೆ ನಿವಾರಿಸಲಾಗುವುದು ಎಂದರು. 

ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ಮರಣ ಪರಿಹಾರ ಪ್ರಕರಣಗಳಲ್ಲಿ ನಿಯಮದಂತೆ ಪರಿಹಾರವನ್ನು ನೀಡಲಾಗುತ್ತಿದೆ. ಮಳೆ ಹಾನಿಗೆ ಸಂಬಂಧಿಸಿದಂತೆ ಜಗಳೂರಿನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಚನ್ನಗಿರಿ ತಾಲ್ಲೂಕಿನಲ್ಲಿ 35 ಕುರಿಗಳು ಸಾವನ್ನಪ್ಪಿವೆ. ಈ ಸಂಬಂಧ ಪರಿಹಾರ ನೀಡಲಾಗುತ್ತಿದೆ ಹಾಗೂ 35 ವಾರಗಳಿಗಾಗುವಷ್ಟು ಮೇವು ಲಭ್ಯವಿದ್ದು, ಯಾವುದೇ ಮೇವಿನ ಸಮಸ್ಯೆ ಇಲ್ಲ ಎಂದರು.

ಸಭೆಗೆ ಮಾಹಿತಿ ನೀಡಿದ ಆಹಾರ ಇಲಾಖೆಯ ಜಂಟಿ ಕಾರ್ಯದರ್ಶಿ ಮಂಟೆಸ್ವಾಮಿ, ಜಿಲ್ಲೆಯಲ್ಲಿ ಈಗಾಗಲೇ 2862 ರೈತರ 52591 ಕ್ವಿಂಟಾಲ್ ರಾಗಿಗೆ ನೋಂದಣಿಯಾಗಿದೆ ಹಾಗೂ 12900 ಪಡಿತರ ಚೀಟಿಗೆ ಅರ್ಜಿಗಳು ಬಂದಿದ್ದು, 4000 ಕಾರ್ಡುಗಳನ್ನು ವಿತರಿಸಲಾಗಿದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕೋವಿಡ್ ಶೂನ್ಯ ಪ್ರಕರಣಗಳಿದ್ದು ದಿನ ನಿತ್ಯ 60-70 ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಲಕ್ಷಣಗಳಿರುವ ಪ್ರತಿಯೊಬ್ಬರಲ್ಲೂ ಐಎಲ್‍ಐ ಹಾಗೂ ಸಾರಿ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಒಟ್ಟಾರೆ ಮೂರನೇ ಅಲೆಯಲ್ಲಿ 1.70 ಲಕ್ಷ ಪರೀಕ್ಷೆಗಳನ್ನು ಮಾಡಲಾಗಿದ್ದು, ಅವುಗಳಲ್ಲಿ 6344 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 15 ಮರಣ ಸಂಭವಿಸಿರುತ್ತವೆ ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನಜ್ಮಾ ಮಾಹಿತಿ ನೀಡಿ, ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ 14 ನೇ ಹಣಕಾಸು ಯೋಜನೆಯಲ್ಲಿ ಶೇ.95.27 ರಷ್ಟು ಸಾಧನೆಯಾಗಿದ್ದು, 15ನೇ ಹಣಕಾಸು ಯೋಜನೆಯಲ್ಲಿ ಶೇ.60.57 ರಷ್ಟು ಪ್ರಗತಿಯಾಗಿದೆ ಎಂದರು.

ಸಭೆಯಲ್ಲಿ ಜಿ.ಪಂ ಸಿಇಒ ಡಾ.ಎ.ಚನ್ನಪ್ಪ, ಅಪರ ಜಿಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿಗಳಾದ ಮಮತ ಹೊಸಗೌಡರ್ ಹಾಗೂ ತಿಮ್ಮಣ್ಣ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ.ಮುದಜ್ಜಿ, ಸ್ಮಾರ್ಟ್ ಸಿಟಿಯ ರವೀಂದ್ರ ಮಲ್ಲಾಪುರ, ಡಿಹೆಚ್‍ಓ ನಾಗರಾಜ್, ಡಾ.ಮುರಳೀಧರ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.