ಬಸವಾದಿ ಶಿವಶರಣರ ಅಧ್ಯಯನ ಅಗತ್ಯ

ಬಸವಾದಿ ಶಿವಶರಣರ ಅಧ್ಯಯನ ಅಗತ್ಯ

ಬಸವ ಜಯಂತಿ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು

ದಾವಣಗೆರೆ, ಮೇ 4- ಹಿಂದಿನ ದಿನಗಳಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಖ್ಯಾತಿ ಯಾಗಿದ್ದ ದಾವಣಗೆರೆ ನಗರ ಕ್ರಮೇಣವಾಗಿ ಶಿಕ್ಷಣ ನಗರಿಯಾಗಿ, ತದನಂತರ ಬೆಣ್ಣೆನಗರಿ ಎಂದು ಕರೆಯಲ್ಪಡಪಡುವಂತಾಯಿತು. ದಾವಣಗೆರೆಯನ್ನು `ಸಾಂಸ್ಕೃತಿಕ ನಗರಿ’ ಎಂದು ಶಾಶ್ವತವಾಗಿ ಉಳಿಸಿಕೊಳ್ಳುವಂತಾಗ ಬೇಕು. ಆಗ ಅದಕ್ಕೆ ಗೌರವ, ಘನತೆ ಹೆಚ್ಚುತ್ತದೆ ಎಂಬ ಆಶಯವನ್ನು ಡಾ. ಶಿವಮೂರ್ತಿ ಮುರುಘಾ ಶರಣರು ವ್ಯಕ್ತಪಡಿಸಿದರು.

ಬಸವ ಜಯಂತ್ಯೋತ್ಸವ ಸಮಿತಿ, ಲಿಂಗಾಯತ ತರುಣ ಸಂಘ, ಬಸವ ಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾ ಶ್ರಮ ಟ್ರಸ್ಟ್ ಸಹಯೋಗದಲ್ಲಿ ನಗರದ ಶಿವಯೋಗಾಶ್ರಮದ ಆವರಣದಲ್ಲಿ ಹಮ್ಮಿಕೊಂ ಡಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಮಾತನಾಡಿದರು.

ಪ್ರಸ್ತುತ ಜಾಗತಿಕ ಮಟ್ಟದಲ್ಲೂ ವಿಶ್ವಗುರು ಬಸವಣ್ಣನವರ ಸ್ಮರಣೆ ಮಾಡುತ್ತಿದ್ದು, ಬಸವಣ್ಣನವರ ಇತಿಹಾಸ, ಪರಂಪರೆಯ ಅಧ್ಯಯನ ನಡೆಯಬೇಕು. ಸಾಧ್ಯವಾದರೆ ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕು ಎಂದರು.

ಬಸವಣ್ಣನವರ, ಶಿವಶರಣರ ಶಕ್ತಿ ಸಾಮರ್ಥ್ಯದ ಅರಿವಾಗಬೇಕೆಂದರೆ ಬಸವ ತತ್ವ ಮತ್ತು ವಚನಗಳ ನಿರಂತರ ಅಧ್ಯಯನ ಮಾಡಬೇಕು.  ಜೀವನದಲ್ಲಿ ಬಸವಣ್ಣನವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಸಂದರ್ಭ ಗಳನ್ನು ಮತ್ತೆ ಮತ್ತೆ ತಂದುಕೊಳ್ಳಬೇಕಾಗಿದೆ ಎಂದು ಹಿತ ನುಡಿದರು.

ಬಸವಣ್ಣನವರು ಈ ಭೂಮಿಗೆ ಬಂದು ಹೋಗಿ 900 ವರ್ಷಗಳು ಸಂದಿವೆ. ಚನ್ನಬಸವಣ್ಣ ದಿವ್ಯ ಜ್ಞಾನಿಗಳು, ಬಸವಣ್ಣ ತ್ರಿಕಾಲ ಜ್ಞಾನಿಗಳು. ಅವರು ಬಿತ್ತಿದ ತತ್ವಗಳು ಇಂದು ಪಲ್ಲವಿಸುತ್ತಿವೆ. ಬೆಳೆ ಕೊಡುತ್ತಿವೆ. ಬಸವಣ್ಣನವರದು ಸಾಂಸ್ಕೃತಿಕ, ಸಮಾನತೆಯ, ಸ್ವಾಭಿಮಾನದ ಇತಿಹಾಸವಾಗಿದೆ.
ಬಸವಾದಿ ಶರಣರನ್ನು ಅಧ್ಯಯನ ಮಾಡಬೇಕಾಗಿದೆ ಎಂದು ಹೇಳಿದರು.

ಎಲ್ಲ ದೇಶಗಳ ಸಂಸದೀಯ ವ್ಯವಸ್ಥೆಗೂ ಮುನ್ನ ಸಂಸದೀಯ ವ್ಯವಸ್ಥೆ ಆರಂಭವಾಗಿದ್ದು ಕರ್ನಾಟಕದ ಬಸವ ಕಲ್ಯಾಣದಲ್ಲಿ. ಸಂಸತ್ತಿನ ಮತ್ತು ಸಂವಿಧಾನದ ಮಾತೃ ಬಸವಾದಿ ಶಿವಶರಣರ `ಅನುಭವ ಮಂಟಪ’ ಎಂದು ಶರಣರು ತಿಳಿಸಿದರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹಾಗೂ ಬಸವ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಬಿ.ಜೆ. ಅಜಯ ಕುಮಾರ್ ನೇತೃತ್ವದಲ್ಲಿ ಬಸವ ಜಯಂತಿಯ ಬೃಹತ್ ಮೆರವಣಿಗೆ ಅದ್ವಿತೀಯವಾಗಿ ನಡೆದಿದೆ ಎಂದು ಹೇಳಲು ಅತೀವ ಸಂತೋಷವಾಗುತ್ತಿದೆ ಎಂದರು.

ಸಮ್ಮುಖ ವಹಿಸಿದ್ದ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿನ ಭಕ್ತಿ ಭಂಡಾರಿ ಬಸವಣ್ಣನವರ ಪರಿಕಲ್ಪನೆ, ಕನಕದಾಸರ ಆಲೋಚನೆಯನ್ನು ಡಾ. ಮುರುಘಾ ಶರಣರು ಸಾಕಾರಗೊಳಿಸಿದ್ದಾರೆ ಎಂದು ಹೇಳಿದರು.

ಬಸವ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳುವ ಜೊತೆಗೆ ಆಚರಣೆಗೆ ತರುವಂತೆ ಕರೆ ನೀಡಿದರು.

ಹೊಸದುರ್ಗ ಮಧುರೆಯ ಶ್ರೀ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಂತರ, ಅನುಭವ ಮಂಟಪದಲ್ಲಿ ಸರ್ವ ಸಮುದಾಯಗಳ ಕಲ್ಯಾಣಕ್ಕಾಗಿ, ಸಮಾಜದ ಒಳಿತಿಗಾಗಿ, ಸಮಾಜಮುಖಿ ಚಿಂತನೆಗಳನ್ನು ಮಾಡುವ ಮೂಲಕ ಜಾರಿಗೆ ತರಲು ಅವಿರತ ಪ್ರಾಮಾಣಿಕ ಪ್ರಯತ್ನವನ್ನು ಬಸವಾದಿ ಶಿವಶರಣರು ಮಾಡಿದ್ದಾರೆ ಎಂದರು.

ಅದರಂತೆ ಚಿತ್ರದುರ್ಗ ಶಿವಮೂರ್ತಿ ಮುರುಘಾ ಶರಣರು ಕೂಡ ಸರ್ವ ಸಮುದಾಯಗಳ ಗುರು ಪೀಠಗಳನ್ನು ಸ್ಥಾಪಿಸಿ, ಗುರುಗಳನ್ನು ನೇಮಿಸಿ ಎಲ್ಲಾ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸರ್ಕಾರ ಮಾಡಬೇಕಾದ ಸಮಾಜ ಸೇವಾ ಕಾರ್ಯಗಳನ್ನು ನಾಡಿನ ಮಠ ಮಾನ್ಯಗಳು ಮಾಡುತ್ತಿವೆ. ಅನ್ನ ದಾಸೋಹ, ಅಕ್ಷರ ದಾಸೋಹದ ಪರಿಕಲ್ಪನೆ ಬಂದದ್ದು ಮೊದಲು ಕರ್ನಾಟಕದಲ್ಲಿ ಎಂದು ತಿಳಿಸಿದರು.

ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಮಾತನಾಡಿ, ಬಸವ ತತ್ವ, ವಚನಗಳನ್ನಾಧರಿಸಿಯೇ ಭಾರತದ ಸಂವಿಧಾನ ರಚನೆಯಾಗಿರುವುದು. ಸಂಸತ್ ಕೂಡ ಅನುಭವ ಮಂಟಪದ ಮಾದರಿಯಲ್ಲಿ ಸ್ಥಾಪನೆಯಾಗಿದೆ ಎಂದರು.

ಮುರುಘಾ ಮಠ ಸಹ ಅನ್ನ ದಾಸೋಹ ಮತ್ತು ಅಕ್ಷರ ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಪ್ರತಿ ತಿಂಗಳು ಉಚಿತ ಸಾಮೂಹಿಕ ವಿವಾಹ, ಅನಾಥರಿಗೆ, ವೃದ್ದರಿಗೆ ಆಶ್ರಯ ಕೊಡುವ ಜೊತೆಗೆ ವಿವಿಧ ಹಂತದ ವಿದ್ಯಾಕೇಂದ್ರಗಳನ್ನು ತೆರೆದು ಶಿಕ್ಷಣ ಸೇವೆಯಲ್ಲಿ ತೊಡಗಿರುವುದು ಮೆಚ್ಚುವಂತಹದ್ದು. ಮುರುಘಾ ಶರಣರು ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು.

ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ದಾವಣಗೆರೆಯಲ್ಲಿ ಇಂದು ನಡೆದ ಬಸವ ಜಯಂತಿ ಉತ್ಸವ ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವವನ್ನು ನೆನಪಿಸುವಂತಿದೆ. ಬಸವ ತತ್ವ ಮತ್ತು ಆದರ್ಶಗಳು ಮನೆ ಮನೆಗಳಲ್ಲಿ ಆಚರಿಸುವಂತಾಗಬೇಕು ಎಂದು ಹಿತ ನುಡಿದರು.

ಕಾರ್ಯಕ್ರಮದಲ್ಲಿ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಮೇದಾರ ಗುರುಪೀಠದ ಶ್ರೀ ಇಮ್ಮಡಿ ಬಸವ ಮೇದಾರ ಸ್ವಾಮೀಜಿ, ರೈತ ಮುಖಂಡ ತೇಜಸ್ವಿ ಪಟೇಲ್, ದಲಿತ ಮುಖಂಡರಾದ ಬಿ.ಹೆಚ್. ವೀರಭದ್ರಪ್ಪ, ಹೆಚ್.ಕೆ. ಬಸವರಾಜ್, ದುರ್ಗಾಂಬಿಕ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಬಿಜೆಪಿ ಮುಖಂಡ ನಸೀರ್ ಅಹಮದ್, ಶ್ರೀಮತಿ ಮಂಗಳ ಅಜಯ್ ಕುಮಾರ್ ಉಪಸ್ಥಿತರಿದ್ದರು.

ಬಸವ ಕಲಾ ಲೋಕದ ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು. ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಾ ಪಿ. ದೊಗ್ಗಳ್ಳಿ ನಿರೂಪಿಸಿದರು.