ಬಸವಣ್ಣನವರ ಚಿಂತನಗಳು ಸಾರ್ವಕಾಲಿಕ ಪ್ರಸ್ತುತ

ಬಸವಣ್ಣನವರ ಚಿಂತನಗಳು ಸಾರ್ವಕಾಲಿಕ ಪ್ರಸ್ತುತ

ಬಸವಣ್ಣನವರ ಷಟ್ ಸ್ಥಲ ವಚನಗಳ ಹಿಂದಿ ಭಾಷಾ ಆವೃತ್ತಿಯನ್ನು ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮೇ 4- ಇಲ್ಲಿನ ತರಳಬಾಳು ಕೇಂದ್ರದಲ್ಲಿ ಇಂದು ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಬಸವಣ್ಣನವರ ಷಟ್ ಸ್ಥಲ ವಚನಗಳ ಹಿಂದಿ ಭಾಷಾ ಆವೃತ್ತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. 

ಪ್ರಸ್ತುತ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಇಂತಹ ಸಂದರ್ಭದಲ್ಲಿ ಬಸವಾದಿ ಶರಣರು ಸಾರಿದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಕೊಂಡರೆ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಬಸವಣ್ಣನವರ ಚಿಂತನೆಗಳು ಸಾರ್ವಕಾಲಿಕ ಪ್ರಸ್ತುತ ಎಂದು ತಿಳಿಸಿದರು. 

 ಜ್ಞಾನ, ತತ್ವಜ್ಞಾನ , ವಿಜ್ಞಾನ, ತಂತ್ರಜ್ಞಾನಗಳ ಸಂಗಮದಂತಿರುವ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ, ನಿತ್ಯ ನಿರಂತರವಾದ ಜ್ಞಾನದ ಹಸಿವುಳ್ಳವರ. ತಂತ್ರಜ್ಞಾನದ ಮೂಲಕ ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಜಾಲತಾಣ ರೂಪಿಸುವುದರ ಮೂಲಕ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ವಚನ ಸಾಹಿತ್ಯವನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದ ಮಾಡಿಸಿರುವುದು ಶ್ಲ್ಯಾಘನೀಯ ಕಾರ್ಯ ಎಂದು   ಬೊಮ್ಮಾಯಿ ಹೇಳಿದರು. 

ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಹಿರಿಯ ಗುರುಗಳು ಸಮಯ ಪಾಲನೆಗೆ ಬಹಳ ಮಹತ್ವ ನೀಡಿದ್ದರು. ಸಮಯ ಪಾಲನೆ ಅವರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಜೊತೆಗೆ ಹಾಸ್ಯ ಪ್ರವೃತ್ತಿಯುಳ್ಳವರಾಗಿದ್ದರು. ವಚನ ಸಾಹಿತ್ಯವನ್ನು ಜಗತ್ತಿನೆಲ್ಲೆಡೆ ಪ್ರಸಾರ ಮಾಡಬೇಕೆಂಬ ಹಂಬಲವುಳ್ಳವರಾಗಿದ್ದರು. ಪೂಜ್ಯರ ಹಂಬಲ ಇಂದು ಈಡೇರುತ್ತಿರುವುದು ಸಂತೋಷ ತಂದಿದೆ. ಬಸವಣ್ಣನವರ ವಚನಗಳ ತೆಲುಗು ಅನುವಾದಿತ ಕೃತಿ ಇಂದು ಬೆಳಕು ಕಾಣುತ್ತಿರುವ ದಿನದಂದೇ ಆಂಧ್ರ ಪ್ರದೇಶ ಸರ್ಕಾರ ನಾಡಿನಾದ್ಯಂತ ಬಸವ ಜಯಂತಿ ಆಚರಣೆಗೆ ಕರೆಕೊಟ್ಟಿರುವುದು ಔಚಿತ್ಯ ಪೂರ್ಣವಾಗಿದೆ ಎಂದರು.

ಮೈಸೂರಿನ ಪ್ರೊ. ಚಂದ್ರಶೇಖರಯ್ಯ ರಚಿಸಿರುವ    ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಜೀವನವನ್ನಾಧರಿಸಿದ `ಧೀರ ಸನ್ಯಾಸಿ’ ಕೃತಿ ಲೋಕಾರ್ಪಣೆ ಮಾಡಿದ ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ಶಿವರಾಜ್‌ ಪಾಟೀಲ್ ಮಾತನಾಡಿ, ರೋಗಗ್ರಸ್ಥ ಸಮಾಜಕ್ಕೆ ವಚನಗಳು ಸಂಜೀವಿನಿಯಿದ್ದಂತೆ, ಇಂದಿನ ಯುವ ಜನತೆ ವಚನ ಸಾಹಿತ್ಯವನ್ನು ಓದುವಂತಾಗಬೇಕು.  ಪೂಜ್ಯರು ರೂಪಿಸಿರುವ ವಚನ ತಂತ್ರಾಂಶದಿಂದ ಕೈಗೆಟುಕುವಂತೆ ಎಲ್ಲಾ ವರ್ಗದವರಿಗೆ ವಚನ ಸಾಹಿತ್ಯ ದೊರಕುವಂತಾಗಿದೆ ಎಂದರು. 

ವಚನ ಸಾಹಿತ್ಯ ಸಂಶೋಧಕ ಡಾ.  ವೀರಣ್ಣ ರಾಜೂರ ಮಾತನಾಡಿ, ವಚನ ಸಾಹಿತ್ಯದ ನಿಧಿಯನ್ನು ಫ.ಗು. ಹಳಕಟ್ಟಿಯವರು ಮೊದಲು ಶೋಧಿಸಿ ಪ್ರಕಟಿಸಿದರು. ಅದನ್ನು ಭಿನ್ನ ಭಿನ್ನ ಮಾಧ್ಯಮದ ಮೂಲಕ ಕರ್ನಾಟಕದಲ್ಲಿ ತೀವ್ರಗತಿಯಲ್ಲಿ ಪ್ರಸಾರ ಮಾಡಿದ ಕೀರ್ತಿ ಸಿರಿಗೆರೆ ಮಠದ್ದು. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ವಚನ ಸಾಹಿತ್ಯವು ಅನ್ಯ  ಭಾಷಿಗರಿಗೂ ದೊರಕುವಂತಾಗಲು ಇಂಗ್ಲಿಷ್, ಹಿಂದಿ, ತೆಲುಗು, ಉರ್ದು ಮುಂತಾದ ಭಾಷೆಗಳಿಗೆ ಅನುವಾದ ಮಾಡಿಸಿ, ಪ್ರಕಟಿಸಿದರು. ಪ್ರಸ್ತುತ ಜಗದ್ಗುರುಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿ 22 ಸಾವಿರ ವಚನಗಳನ್ನು ಜಾಲತಾಣದ ಮೂಲಕ ಜಗತ್ತಿನಾದ್ಯಂತ ಬೆರಳ ತುದಿಯಲ್ಲಿ  ದೊರಕುವಂತೆ ಮಾಡಿದ್ದಾರೆ ಎಂದರು. 

ವಚನ ಸಾಹಿತ್ಯ ಸರ್ವೋದಯದ ತೀರ್ಥವಿದ್ದಂತೆ. ಜಾತಿ, ಮತ, ವರ್ಗಗಳ ಭೇದವಿಲ್ಲದೆ ಎಲ್ಲರೂ ಸಮಾನರು  ಎಂಬ ತತ್ವನ್ನು ಶರಣರು ಸಾರಿದರು. ಜನಭಾಷೆಯ ಮೂಲಕ ತತ್ವವನ್ನು ಸರಳವಾಗಿ ಹೇಳಿದ ಬಸವಾದಿ ಶರಣರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರು  ಎಂದು ಬಹುಭಾಷಾ ವಿದ್ವಾಂಸ ಡಾ. ಹಂಪನಾ ನುಡಿದರು. 

ವಿಪ್ರೊ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಪಿ. ಸುಬ್ರಹ್ಮಣ್ಯಂ ಅವರು ಪೂಜ್ಯರು ರೂಪಿಸಿರುವ ಶಿವಶರಣ ವಚನ ಸಂಪುಟ ಜಾಲತಾಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.   

ಹೈದರಾಬಾದ್ ಹೈಕೋರ್ಟಿನ ನ್ಯಾಯವಾದಿ ವಿಜಯಕುಮಾರ ಹೇರೂರು, ಲೇಖಕ ಚಂದ್ರಶೇಖರಯ್ಯ, ಶಾಸಕ ವೈ.ಎ ನಾರಾಯಣ ಸ್ವಾಮಿ, ಸುರೇಶ್ ಮುಂತಾದವರು ಮಾತನಾಡಿದರು. 

ಕು. ಪೃಥ್ವಿ ಬೇಲೂರು, ಐಶ್ವರ್ಯ ಮತ್ತು ಚನ್ನೈನ ಚಿತ್ರ ಚಂದ್ರಶೇಖರ್ ವಚನ ನೃತ್ಯ ಅಭಿನಯಿಸಿದರು. ತರಳಬಾಳು ಕೇಂದ್ರದ ಕಾರ್ಯದರ್ಶಿ ಬಾತಿ ವಿಶ್ವನಾಥ್ ಸ್ವಾಗತಿಸಿದರು. ಕೇಂದ್ರದ ಅಧ್ಯಕ್ಷ ಚಂದ್ರಪ್ಪ ವಂದಿಸಿದರು.