ಶೋಷಿತರು-ಬಡವರ ದನಿಯಾಗಿದ್ದ ಹೆಚ್ಕೆಆರ್‌

ಶೋಷಿತರು-ಬಡವರ ದನಿಯಾಗಿದ್ದ ಹೆಚ್ಕೆಆರ್‌

`ದಿ. ಕಾಂ. ಹೆಚ್.ಕೆ. ರಾಮಚಂದ್ರಪ್ಪನವರ ನುಡಿ ನಮನ’ ಕಾರ್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ

ದಾವಣಗೆರೆ, ಏ. 28- ಕಾಮ್ರೆಡ್ ಹೆಚ್.ಕೆ. ರಾಮಚಂದ್ರಪ್ಪ ಅವರು ಶೋಷಿತರು, ಬಡವರ ದನಿಯಾಗಿದ್ದರು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ  ಸಮಿತಿ ವತಿಯಿಂದ ನಗರದ ಐಟಿಐ ಕಾಲೇಜು ಬಳಿ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ `ದಿ. ಕಾಮ್ರೆಡ್ ಹೆಚ್.ಕೆ. ರಾಮಚಂದ್ರಪ್ಪನವರಿಗೆ ನುಡಿ ನಮನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಬಡವರಿಗೆ ಕಷ್ಟ ಬಂದಾಗ ಸ್ಪಂದಿಸುತ್ತಿದ್ದ ರಾಮಚಂದ್ರಪ್ಪ ಅವರು, ನಗರದಲ್ಲಿ `ಹೆಚ್ಕೆಆರ್‌’ ಎಂದೇ ಜನಪ್ರಿಯರಾಗಿದ್ದರು. ಅವರ ಮನೆಯ ಬಳಿಯ ವೃತ್ತ ಹೆಚ್ಕೆಆರ್‌ ವೃತ್ತ ಎಂದೇ ಹೆಸರು ವಾಸಿಯಾಗಿತ್ತು ಎಂದರು.

ಜನಪ್ರಿಯತೆಗಾಗಿ ಅನೇಕರು ಹಣ ಖರ್ಚು ಮಾಡುತ್ತಾ, ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ರಾಮಚಂದ್ರಪ್ಪ ಅವರು, ಹೋರಾಟಗಳ ಮೂಲಕವೇ ಜನಪ್ರಿಯರಾಗಿದ್ದರು. ಅವರ ಮಾತುಗಳು ಖಡಕ್ ಆಗಿರುತ್ತಿದ್ದವು ಎಂದು ನೆನಪಿಸಿಕೊಂಡ ಶ್ರೀಗಳು, ಅಂತಹ ನಾಯಕರು ದಾವಣಗೆರೆಗೆ ಮತ್ತೆ ಬೇಕಾಗಿದೆ ಎಂದರು.

ಹೆಚ್ಕೆಆರ್‌ ಅವರ ಸೇವೆ, ಹೋರಾಟವನ್ನು ಗುರುತಿಸಿ 2015ರಲ್ಲಿ ಮುರುಘಾ ಮಠದಿಂದ ಶೂನ್ಯಪೀಠ ಚನ್ನಬಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಶ್ರೀಮಠದ ಎಲ್ಲಾ ಕಾರ್ಯಕ್ರಮಗಳಿಗೂ, ಸಭೆಗಳಲ್ಲೂ ಅವರು ಭಾಗವಹಿಸುತ್ತಿದ್ದರು. ಮುರುಘಾ ಶರಣರು ಹಾಗೂ ಅವರ ನಡುವೆ ಉತ್ತಮ ಸಂಬಂಧವಿತ್ತು ಎಂದು ಹೇಳಿದರು.

ಬಸವ ಜಯಂತಿಗೆ ಬನ್ನಿ: ಬರುವ ಮೇ 4 ರಂದು ದಾವಣಗೆರೆ ವಿರಕ್ತ ಮಠದಲ್ಲಿ ಬಸವ ಜಯಂತಿ ಆಚರಿಸಲಾಗುತ್ತಿದ್ದು, ಮೇ 2ಕ್ಕೆ ವಿರಕ್ತ ಮಠದಿಂದ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಆಗಮಿಸುವಂತೆ ನೆರೆದಿದ್ದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಶ್ರೀಗಳು ಹೇಳಿದರು.

 ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯಾಧ್ಯಕ್ಷ ಎನ್.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಕಾರ್ಯದರ್ಶಿ ಎಸ್.ಎಸ್. ಮಲ್ಲಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಹೆಚ್. ವಿಜಯಕುಮಾರ್, ಪ್ರಗತಿಪರ ಚಿಂತಕ ಎ.ಬಿ. ರಾಮಚಂದ್ರಪ್ಪ, ಪತ್ರಕರ್ತ ಬಿ.ಎನ್. ಮಲ್ಲೇಶ್, ಹಿರಿಯ ಕಾರ್ಮಿಕ ಮುಖಂಡ ಆನಂದರಾಜ್, ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಮಂಡಳಿಯ ಕಾರ್ಯದರ್ಶಿ ಆವರಗೆರೆ ಚಂದ್ರು, ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ, ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಅಣಜಿ ಚಂದ್ರಶೇಖರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೆ.ಬಸವಂತಪ್ಪ ಇತರರು ಉಪಸ್ಥಿತರಿದ್ದರು.

ಎಂ.ಬಿ. ಶಾರದಮ್ಮ ಸ್ವಾಗತಿಸಿದರು. ಖಜಾಂಚಿ ವಿಶಾಲಾಕ್ಷಿ ಮೃತ್ಯುಂಜಯ ನಿರೂಪಿಸಿದರು. ಆವರಗೆರೆ ವಾಸು ವಂದಿಸಿದರು.