ಮನುಕುಲದ ಓರೆ-ಕೋರೆಗಳನ್ನು ತಿದ್ದುವ ಪ್ರಬಲ ಮಾಧ್ಯಮ ನಾಟಕ : ಹೆಬ್ಬಾಳು ಶ್ರೀ

ಮನುಕುಲದ ಓರೆ-ಕೋರೆಗಳನ್ನು ತಿದ್ದುವ ಪ್ರಬಲ ಮಾಧ್ಯಮ ನಾಟಕ : ಹೆಬ್ಬಾಳು ಶ್ರೀ

ಶಿವಸಂಚಾರ ನಾಟಕೋತ್ಸವ

ವಿದ್ಯಾನಗರದಲ್ಲಿ ಗುರುವಾರ ಬಿ.ಆರ್. ಅರಿಶಿನಗೋಡಿ ವಿರಚಿತ, ವೈ.ಡಿ. ಬಾದಾಮಿ ನಿರ್ದೇಶನದ `ಬಸ್ ಕಂಡಕ್ಟರ್’ ನಾಟಕವನ್ನು ಸಾಣೇಹಳ್ಳಿ ಶಿವಸಂಚಾರ ಕಲಾವಿದರು ಪ್ರದರ್ಶಿಸಿದರು.

ದಾವಣಗೆರೆ, ಏ. 28- ನಾಟಕ ಪರಂಪರೆಗೆ  ಸಾವಿರಾರು ವರ್ಷಗಳ ಇತಿಹಾಸ ವಿದೆ. ಮನುಕುಲದ ಓರೆ-ಕೋರೆಗಳನ್ನು ನೇರವಾಗಿ ತಿದ್ದುವಂತಹ ಪ್ರಬಲ ಮಾಧ್ಯಮ `ನಾಟಕ’ ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.

ನಗರದ ಸ್ನೇಹ ಬಳಗದ ವತಿಯಿಂದ ವಿದ್ಯಾನಗರದ ನೂತನ ಕಾಲೇಜು ಹತ್ತಿರದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಶಿವಸಂಚಾರ ನಾಟಕೋತ್ಸವದ ಮೂರನೇ ದಿನದ ಕಾರ್ಯ ಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಾಟಕಗಳ ಮೂಲಕ ಮನುಷ್ಯನ ದು:ಖ, ದುಮ್ಮಾನಗಳನ್ನು ದೂರ ಮಾಡಿ, ಸಮಾಜದ ಓರೆ ಕೋರೆಗಳನ್ನು ತಿದ್ದುವ ಮೂಲಕ ಆದರ್ಶಪ್ರಾಯ ಕೆಲಸವನ್ನು ಪಂಡಿತಾರಾಧ್ಯ ಶ್ರೀಗಳು ಮಾಡುತ್ತಾ ಬಂದಿದ್ದಾರೆ ಎಂದು ಶ್ರೀಗಳ ರಂಗ ಸೇವೆಯನ್ನು ಸ್ಮರಿಸಿದರು.

`ಸತ್ಯಹರಿಶ್ಚಂದ್ರ’ ನಾಟಕ ಗಾಂಧೀಜಿ ಮೇಲೆ ಪ್ರಭಾವ ಬೀರಿ, ಅವರ ಜೀವನದ ಪರಿವರ್ತನೆ ಜೊತೆಗೆ ಪಿತಾಮಹಾ ಆಗಲಿಕ್ಕೆ ಕಾರಣವಾಯಿತು. ನಾಟಕಗಳ ಮೂಲಕ ಹೇಳುವ ಪ್ರತಿಯೊಂದು ಜೀವನದ ಸಂದೇಶ ಗಳು ನೇರವಾಗಿ ಜನರ ಮನಮುಟ್ಟುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದರು.

ಗುಬ್ಬಿ ವೀರಣ್ಣ, ಏಣಗಿ ಬಾಳಪ್ಪ, ಪಂಚಾ ಕ್ಷರಿ ಗವಾಯಿಗಳು, ಗುಡಗೇರಿ ಬಸವರಾಜ್, ಚಿಂದೋಡಿ ಲೀಲಾ ಮುಂತಾದ ರಂಗಕರ್ಮಿ ಗಳು ನಾಟಕ ಕಂಪನಿಗಳ ಮೂಲಕ ಕಲಾ ವಿದರಿಗೆ ಬದುಕು ಕಟ್ಟಿಕೊಟ್ಟವರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ದೇಶದಲ್ಲೇ ಸಾಣೇಹಳ್ಳಿ ಎಂದರೆ ಕಲಾವಿದರನ್ನು ತಯಾರು ಮಾಡುವ ಕಾರ್ಖಾನೆ ಎಂಬ ಭಾವನೆ ಇದೆ.  ಪಂಡಿತಾರಾಧ್ಯ ಶ್ರೀಗಳ ಕಲಾ ಸೇವೆ ಅವಿಸ್ಮರಣೀಯ ಎಂದರು.

ಕುಗ್ರಾಮ ಸಾಣೇಹಳ್ಳಿಯ ಮಣ್ಣಿನಲ್ಲಿ ನಾಟಕ ಸಂಸ್ಕೃತಿಯನ್ನೇ ಶ್ರೀಗಳು ಬಿತ್ತಿದ್ದಾರೆ. ಉತ್ತಮ ನಾಟಕಗಳ ಪ್ರದರ್ಶನವನ್ನು ನೀಡುವ ಮೂಲಕ ಶಿವಸಂಚಾರ ನಾಟಕ ಕಲಾ ತಂಡ ಜನರ ಪರಿವರ್ತನೆಗೆ ಕಾರಣವಾಗಿದೆ. ದೇಶ -ವಿದೇಶಗಳಲ್ಲೂ ಕಲಾವಿದರು ಖ್ಯಾತಿ ಹೊಂದಲಿ ಎಂದು ಆಶಿಸಿದರು.

`ನಮ್ಮ ಕುಟುಂಬ ನಮ್ಮ ಸಂಸ್ಕೃತಿ’ ಕುರಿತು ಉಪನ್ಯಾಸ ನೀಡಿದ ಕುಟುಂಬ ಪ್ರಮೋದನ್ ಮುಖ್ಯಸ್ಥ ಕೆ.ಎಸ್. ರಮೇಶ್ ಅವರು, ಭಾರ ತೀಯ ಕುಟುಂಬ ವ್ಯವಸ್ಥೆ ಜಗತ್ತಿಗೇ ಉತ್ತಮ ಕೊಡುಗೆಯನ್ನು ನೀಡಿದೆ. ಒಟ್ಟು ಕುಟುಂಬ ವ್ಯವಸ್ಥೆ ಅನುಕರಣೀಯವಾದುದು ಎಂದರು.

ವಯೋಮಾನ, ಸ್ವಭಾವ, ಕುಟುಂಬದಲ್ಲಿ ಭಿನ್ನತೆ ಕಂಡು ಬಂದರೂ ಸಹ ಸಂಘರ್ಷದ ಬದಲು ಸಮನ್ವಯತೆಯನ್ನು ಕಾಣುತ್ತೇವೆ ಎಂದು ಹೇಳಿದರು.

ವರ್ತಕ ಕಂಸಾಗರದ ಪಂಚಾಕ್ಷರಪ್ಪ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ರೈತ ಮುಖಂಡ ಶಾಮನೂರು ಲಿಂಗರಾಜ್ ಮಾತನಾಡಿದರು. ನಿವೃತ್ತ ಅಧಿಕಾರಿಗಳಾದ ಕರಿ ಯಪ್ಪ, ಈರಣ್ಣ ಇತರರು ವೇದಿಕೆಯಲ್ಲಿದ್ದರು.

ಕದಳಿ ಮಹಿಳಾ ವೇದಿಕೆ ಸದಸ್ಯರು ವಚನ ಗಾಯನ ನಡೆಸಿಕೊಟ್ಟರು. ನಿವೃತ್ತ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ಸ್ವಾಗತಿಸಿದರು. ಶಿಕ್ಷಕ ಎಂ. ಗುರುಸಿದ್ಧಸ್ವಾಮಿ ನಿರೂಪಿಸಿದರು. ವೈ. ಮಂಜಪ್ಪ ಕಾಕನೂರು ವಂದಿಸಿದರು.