ದೊಡ್ಡ, ಸಣ್ಣ ರೈತ ಎನ್ನದೇ ಬೇಡಿಕೆ ಈಡೇರಿಸಲು ಮುಂದಾಗಿ

ದೊಡ್ಡ, ಸಣ್ಣ ರೈತ ಎನ್ನದೇ ಬೇಡಿಕೆ ಈಡೇರಿಸಲು ಮುಂದಾಗಿ

ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಸಭಾಪತಿ ಹೊರಟ್ಟಿ ಅವರಿಗೆ ತರಳಬಾಳು ಜಗದ್ಗುರುಗಳ ಸೂಚನೆ

ರಾಣೇಬೆನ್ನೂರು, ಏ. 28-  ದೊಡ್ಡ, ಸಣ್ಣ ರೈತ ಎನ್ನುವ ತಾರತಮ್ಯವಾಗಲೀ,  ಮುಂಗಾರು, ಹಿಂಗಾರು ಎಂದು ಬೆಳೆಗಳ ವಿಂಗಡನೆ ಬೇಡ, ಎಲ್ಲೆಡೆ ಎಲ್ಲರದ್ದು ಸಮನಾದ ಶ್ರಮ ಇರುತ್ತೆ. ಎಲ್ಲ ರೈತರನ್ನೂ ಸರ್ಕಾರ ಸಮನಾಗಿ ಕಾಣಬೇಕು. ಜನರ ಬೇಡಿಕೆಗಳು ಅಸಾಧ್ಯವಾದವುಗಳು ಇರಲ್ಲ. ಸಾಮಾನ್ಯ ಬೇಡಿಕೆಗಳಿರುತ್ತವೆ. ಈ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸೂಚನೆ ನೀಡಿದರು.

ರಾಣೇಬೆನ್ನೂರಿನಲ್ಲಿ ನಗರಸಭೆ ಮಾಜಿ ಸದಸ್ಯ ಮಂಜುನಾಥಗೌಡ ಶಿವಣ್ಣನವರ ನಡೆಸಿದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಜನಪ್ರತಿನಿಧಿಗಳಾದವರು ಸ್ವಾಮೀಜಿ ಗಳು ಭಾಗವಹಿಸುವ ಸಭೆ-ಸಮಾರಂಭಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ ವಿಧಾನಸಭೆ, ವಿಧಾನ ಪರಿಷತ್‌ಗಳಲ್ಲಿ ನಾವು ಬಂದು  ಮಾತನಾಡಲು ಆಗಲ್ಲ. ನೀವು ಸರ್ಕಾರಕ್ಕೆ ಸರಿಯಾದ ಮಾರ್ಗದರ್ಶನ ಮಾಡುವ ಮೂಲಕ ರೈತರ ನೋವಿಗೆ ಸ್ಪಂದಿಸುವಂತೆ ಸಲಹೆ ನೀಡಿದರು.

ನಾಡಿನ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತಿಸುವ ಸೌಧಗಳಲ್ಲಿ ಕೇವಲ ಗದ್ದಲ ಮಾಡುತ್ತಾರೆ. ಮೊದಲು ನೀವು ಸರಿಯಾದರೆ, ಎಲ್ಲವೂ ಸರಿಯಾಗುತ್ತೆ ಎಂದು ವ್ಯವಸ್ಥೆಯ ಬಗ್ಗೆ ಅತ್ಯಂತ ಬೇಸರವಿರುವುದನ್ನು ಶ್ರೀಗಳು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದರು.

ಜಗದ್ಗುರುಗಳ ಮಾತುಗಳಲ್ಲಿ ಗಟ್ಟಿತನವಿರುತ್ತದೆ. ಅವು ಜನ ಕಲ್ಯಾಣದ ಪರ ಇರುತ್ತವೆ. ಅವರ ಆಶಯಗಳನ್ನು ಮುಖ್ಯಮಂತ್ರಿಗಳಿಗೆ ಪತ್ರದ ಮುಖೇನ ತಿಳಿಸುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಪಟ್ಟಸಾಲಿ ಪೀಠದ ಶ್ರೀ ಪ್ರಭುಲಿಂಗ ಸ್ವಾಮೀಜಿ,  ಶನೇಶ್ಚರ ಮಠದ ಶ್ರೀ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ದಾವಣಗೆರೆ ಸಂಸದ ಜಿ.ಎಂ. ಸಿದ್ಧೇಶ್ವರ ಸಮಾರಂಭ ಉದ್ಘಾಟಿಸಿದರು, ಶಾಸಕ ಅರುಣಕುಮಾರ ಪೂಜಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ, ಮಾಜಿ ಶಾಸಕರಾದ ಬಿ.ಪಿ. ಹರೀಶ್, ಯು.ಬಿ. ಬಣಕಾರ ಮತ್ತಿತರರಿದ್ದರು. 

   ತಮ್ಮ ತಾಯಿ-ತಂದೆ ಸ್ಮರಣಾರ್ಥ 46 ಜೋಡಿಗಳ ವಿವಾಹ ಮಾಡಿಸಿದ ಮಂಜುನಾಥ ಗೌಡ ಶಿವಣ್ಣನವರ ಪ್ರಾಸ್ತಾವಿಕವಾಗಿ  ಮಾತನಾಡಿ,  ಸಣ್ಣವನಿದ್ದಾಗಲೇ ತಂದೆ-ತಾಯಿಗಳನ್ನ ಕಳೆದುಕೊಂಡು ಇತರರಿಂದ ಬೆಳೆದ ನಾನು, ಇತರರಿಗೆ ಏನಾದರು ಒಳ್ಳೆಯದನ್ನೇ ಮಾಡಬೇಕು ಎನ್ನುವ ಅಭಿಲಾಷೆಯಿಂದ ಮೂರು  ವರ್ಷಗಳಿಗೊಮ್ಮೆ ಈ ಸಮಾರಂಭ ಮಾಡುತ್ತಿರುವುದಾಗಿ ತಿಳಿಸಿದರು.