ಕೊಡುಗೆಗಳಿಂದ ಬಡವಾಗುತ್ತಿರುವ ರಾಜ್ಯಗಳು

ಕೊಡುಗೆಗಳಿಂದ ಬಡವಾಗುತ್ತಿರುವ ರಾಜ್ಯಗಳು

ಉಚಿತ ಕೊಡುಗೆಗಳನ್ನು ಶಾಶ್ವತಗೊಳಿಸಿದರೆ ಕೆಲಸ ಮಾಡುವವರಿಗೆ ತಣ್ಣೀರೆರಚಿದಂತೆ. ಅದರಲ್ಲೂ ಆರ್ಥಿಕ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಉಚಿತ ಕೊಡುಗೆ ಕೊಡುವುದು ಅಪರಾಧಕ್ಕೆ ಸಮ. ಇದರ ಬದಲು, ಸರ್ಕಾರಿ ನೆರವು ಪಡೆಯಬೇಕಾದರೆ  ಕೆಲಸ ಮಾಡಿ ಎಂದು ಹೇಳುವುದೇ ಸರಿಯಾದ ಮಾರ್ಗ.

 

ಶ್ರೀಲಂಕಾ ಹಾಗೂ ಪಾಕಿಸ್ತಾನಗಳ ಆರ್ಥಿಕ ಬಿಕ್ಕಟ್ಟಿನ ನಂತರ ಪಕ್ಕದ ನೇಪಾಳದಲ್ಲೂ ಆರ್ಥಿಕ ಸಮಸ್ಯೆ ಉಲ್ಬಣಿಸಿದ ವರದಿಗಳು ಬರುತ್ತಿವೆ. ಇದು ಭಾರತಕ್ಕೆ ಎಚ್ಚರಿಕೆ ಗಂಟೆಯೂ ಆಗಿದೆ. ಆದರೆ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬುದಷ್ಟೇ ಈಗಿರುವ ಪ್ರಶ್ನೆ.

ಪ್ರಜಾಪ್ರಭುತ್ವದಲ್ಲಿ ಪ್ರಭುಗಳಾಗಲು ಜನಪ್ರಿಯತೆ ಅನಿವಾರ್ಯ. ಇಂತಹ ಜನಪ್ರಿಯತೆ ಒಳ್ಳೆಯ ಕೆಲಸ ದಿಂದಲೂ ಬರಬಹುದು, ಅಡ್ಡ ದಾರಿಯಿಂದಲೂ ಬರ ಬಹುದು. ಆರ್ಥಿಕತೆ ಸುಧಾರಿಸಿ, ಒಳ್ಳೆಯ ಕೆಲಸಗಳನ್ನು ಮಾಡಿ ಚುನಾವಣೆ ಗೆಲ್ಲಬಹುದು. ಇಲ್ಲವೇ ಉಚಿತ ಕೊಡುಗೆ ನೀಡಿ ಜನಪ್ರಿಯರಾಗಬಹುದು. ಮೊದಲಿನ ದಾರಿಗಿಂತ ಎರಡನೇ ದಾರಿಯೇ ಅತಿ ಸುಲಭ.

ಹೀಗಾಗಿಯೇ ದೇಶದ ಹಲವಾರು ರಾಜ್ಯಗಳು ದುಡಿದು ಗಳಿಸಿ ಎಂದು ಹೇಳುವುದಕ್ಕಿಂತ, ಉಚಿತ ಕೊಡುಗೆ ಪಡೆಯಿರಿ ಎಂದು ಜನರ ಓಲೈಕೆಯಲ್ಲಿ ತೊಡಗಿವೆ. ಇದರಿಂದಾಗಿ ರಾಜ್ಯಗಳ ಮೇಲಿನ ಹೊರೆ ನಿರಂತರವಾಗಿ ಹೆಚ್ಚಾಗುತ್ತಿದೆ.

ಸಾಲದಲ್ಲೂ ಕೊಡುಗೆ : ಇತ್ತೀಚೆಗಷ್ಟೇ ರಾಜಸ್ಥಾನ ಸರ್ಕಾರ ತನ್ನ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ತಂದಿದೆ. ಕರ್ನಾಟಕ ಸಹ ಅದೇ ಹಾದಿಯಲ್ಲಿ ಸಾಗುವ ಸೂಚನೆ ನೀಡುತ್ತಿದೆ. ದೆಹಲಿಯಲ್ಲಿ ಉಚಿತ ವಿದ್ಯುತ್ – ನೀರು ಕೊಡಲಾಗುತ್ತಿದೆ. ಆಮ್ ಆದ್ಮಿ ಪಾರ್ಟಿ ಸರ್ಕಾರ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ 300 ಯುನಿಟ್ ಉಚಿತ ವಿದ್ಯುತ್ ಕೊಡಲು ಹೊರಟಿದೆ. ಅದೂ ರಾಜ್ಯ, ಭಾರತದಲ್ಲೇ ಬ್ರಹ್ಮಾಂಡ ಸಾಲದಲ್ಲಿ ಮುಳುಗಿರುವಾಗ!

ರಾಜ್ಯಗಳ ಜಿ.ಡಿ.ಪಿ. ಹಾಗೂ ಸಾಲದ ಪ್ರಮಾಣಕ್ಕೆ ಹೋಲಿಸಿದಾಗ ಪಂಜಾಬ್‌ ಪರಿಸ್ಥಿತಿ ಶೋಚನೀಯವಾಗಿದೆ. ಜಿ.ಡಿ.ಪಿ.ಯ ಶೇ.53.3ರಷ್ಟು ಸಾಲವಿದೆ. ರಾಜ್ಯದ ಒಟ್ಟು ಸಾಲ 3 ಲಕ್ಷ ಕೋಟಿ ರೂ. ಆಗಿದೆ. ರಾಜ್ಯದ ಶೇ.40ರಷ್ಟು ಆದಾಯ ಈಗಾಗಲೇ ಸಾಲಕ್ಕೆ ಬಡ್ಡಿ ಕೊಡುವುದಕ್ಕೇ ಹೋಗುತ್ತಿದೆ. ಸರ್ಕಾರ ನಡೆಸುವುದೇ ಕಷ್ಟವಾಗಿ, 50 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳುತ್ತಿದೆ. ಇಷ್ಟರ ನಡುವೆ, ವರ್ಷಕ್ಕೆ 5 ಸಾವಿರ ಕೋಟಿ ರೂ. ಹೊರೆ ತರುವ 300 ಯುನಿಟ್ ಉಚಿತ ವಿದ್ಯುತ್ ಕೊಡುಗೆ ಕೊಡಲು ಹೊರಟಿದೆ. ರಾಜ್ಯದ ಪ್ರತಿ ಮಹಿಳೆಗೆ 1,000 ರೂ. ಕೊಡುವ ಮೂಲಕ ತಿಂಗಳಿಗೆ 12 ಸಾವಿರ ಕೋಟಿ ರೂ.ಗಳ ಹೊರೆಯಾಗುವ ಇನ್ನೊಂದು ಭರವಸೆ ಯನ್ನೂ ಈಡೇರಿಸಲು ಆಮ್ ಆದ್ಮಿ ಪಾರ್ಟಿ ಬಯಸಿದೆ.

ಇತರೆ ರಾಜ್ಯಗಳೂ ಕೊಡುಗೆ ನೀಡುವುದರಲ್ಲಿ ಹಿಂದಿವೆ ಎಂದಲ್ಲ. ಆದರೆ, ಆರ್ಥಿಕ ಪರಿಸ್ಥಿತಿ ಪರಿಗಣಿಸಿದಾಗ ಪಂಜಾಬ್ ಪರಿಸ್ಥಿತಿ ಕಠಿಣವಾಗಿದೆ ಅಷ್ಟೇ.  

ಮಳೆಗಾಲದ ಚಿಂತೆಯಿಲ್ಲ :  ಚಳಿಗಾಲದಲ್ಲಿ ಗುಡಿಸಲು ಕುಸಿಯುವಂತಾಗಿದೆ ಎಂದರೆ, ಮಳೆಗಾಲದ ಒಳಗೆ ಅದನ್ನು ದುರಸ್ತಿ ಮಾಡಬೇಕು ಎಂಬ ಯೋಚನೆಯ ಬದಲು, ಗಳಗಳನ್ನು ಹಿರಿದು ಬೆಂಕಿ ಹಚ್ಚಿ ಬಿಸಿ ಕಾಯಿಸಿಕೊಳ್ಳೋಣ. ಮಳೆಗಾಲ ಬಂದಾಗ ನೋಡಿಕೊಂಡರಾಯಿತು ಎಂಬ ರೀತಿಯಲ್ಲಿ
ಶ್ರೀಲಂಕಾ ರಾಜಕಾರಣಿಗಳು ಯೋಚಿಸಿದ್ದರು. ಆದರೆ, ಮಳೆಗಾಲ ಅವರು ನಿರೀಕ್ಷಿಸಿದ್ದಕ್ಕಿಂತ ಮೊದಲೇ ಬಂದಿತ್ತು. 

ಕೋವಿಡ್ ಕಾರಣದಿಂದಾಗಿ ಮುಂದೊಂದು ದಿನ ಬರಬಹುದಾಗಿದ್ದ ಬಿಕ್ಕಟ್ಟು ಮೊದಲೇ ಬಂತು. ಇದರ ಜೊತೆಗೆ ಹಣದುಬ್ಬರ, ಉಕ್ರೇನ್ ಯುದ್ಧ ದಿಂದ ಆದ ಪರಿಣಾಮಗಳು ಆರ್ಥಿಕತೆ ಬಸವಳಿಯುವಂತೆ ಮಾಡಿದವು.

ಉಚಿತ ಕೊಡುಗೆಗಳನ್ನು ಶಾಶ್ವತ ಗೊಳಿಸಿದರೆ ಕೆಲಸ ಮಾಡುವವರಿಗೆ ತಣ್ಣೀರೆ ರಚಿದಂತೆ. ಅದರಲ್ಲೂ ಆರ್ಥಿಕ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಉಚಿತ ಕೊಡುಗೆ ಕೊಡುವುದು ಅಪರಾಧಕ್ಕೆ ಸಮ. ಇದರ ಬದಲು, ಸರ್ಕಾರಿ ನೆರವು ಪಡೆಯಬೇಕಾದರೆ ಕೆಲಸ ಮಾಡಿ ಎಂದು ಹೇಳುವುದೇ ಸರಿಯಾದ ಮಾರ್ಗ.

ಕೈಗಳಿಗೆ ಕೆಲಸವಿಲ್ಲ : ದೇಶದಲ್ಲಿ ಲಕ್ಷಾಂತರ ಕೆಲಸಗಳು ಆಗಬೇಕಿದೆ. ದುಡಿಯಲು ಕೋಟಿಗಟ್ಟಲೆ ಕೈಗಳಿವೆ. ಒಂದೆಡೆ ನಿರುದ್ಯೋಗ ಇದ್ದರೆ, ಇನ್ನೊಂದೆಡೆ ಆಗಬೇಕಾದ ಕೆಲಸಗಳಿವೆ, ಮತ್ತೊಂದೆಡೆ ಸರ್ಕಾರಗಳ ಬಳಿ ಹಣವಿದೆ. ದುರಾದೃಷ್ಟವಶಾತ್, ಸರ್ಕಾರಗಳು ಹಣವನ್ನು ಕೊಡುಗೆಗೆ ಖರ್ಚು ಮಾಡುತ್ತಿವೆ. ಆದರೆ, ದುಡಿಯುವ ಕೈಗಳಿಂದ ಕೆಲಸಗಳು ಆಗುತ್ತಿಲ್ಲ.

ಕೊಡುಗೆಯೂ ಭ್ರಷ್ಟಾಚಾರ : ಭ್ರಷ್ಟಾಚಾರ ನಾನಾ ಸ್ವರೂಪದಲ್ಲಿ ಇರುತ್ತದೆ. ಚುನಾವಣೆ ಸಂದರ್ಭದಲ್ಲಿ ಹಣ ಕೊಡುತ್ತೇನೆ, ವೋಟು ಕೊಡಿ ಎಂಬುದು ಭ್ರಷ್ಟಾಚಾರ. ಅದೇ ರೀತಿ ಚುನಾವಣೆ ನಂತರ ಪುಕ್ಕಟ್ಟೆ ಹಣ ಕೊಡುತ್ತೇನೆ, ವೋಟು ಕೊಡಿ ಎಂದು ಹೇಳುವುದನ್ನೂ ಭ್ರಷ್ಟಾಚಾರವಾಗಿ ಏಕೆ ಪರಿಗಣಿಸಬಾರದು? ಅದರಲ್ಲೂ ಆರ್ಥಿಕತೆಯನ್ನು ದುರ್ಬಲಗೊಳಿಸಿ ಜನರಿಗೆ ಪುಕ್ಕಟೆ ಹಣ ಕೊಡುವುದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸರಿ ಸಮ.

ಕೂತುಂಡರೆ ಕುಡಿಕೆ ಹೊನ್ನು ಸಾಲದು, ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತುಗಳಂತೆ ದುಡಿದು ಉಣ್ಣುವ ದೇಶ ಹಾಗೂ ಜನರು ನೆಮ್ಮದಿ ಕಾಣಲು ಸಾಧ್ಯ. ಇನ್ನಾದರೂ ಪ್ರಭುಗಳು ಹಾಗೂ ಅವರನ್ನು ಆಯ್ಕೆ ಮಾಡುವ ಪ್ರಜೆಗಳು ಚುನಾವಣೆ ನಂತರ ಪುಕ್ಕಟ್ಟೆ ಹಣ ಕೊಡುವ ಭ್ರಷ್ಟಾಚಾರಕ್ಕೆ ತೆರೆ ಎಳೆಯಬೇಕು. ಇಲ್ಲವಾದರೆ ಭಾರತವೂ ಇನ್ನೊಂದು ಶ್ರೀಲಂಕಾ ಆಗುವ ದಿನಗಳು ದೂರವಿಲ್ಲ.


ಎಸ್.ಎ. ಶ್ರೀನಿವಾಸ್‌
ದಾವಣಗೆರೆ.
srinivas.sa@gmail.com