ಭತ್ತದ ಬೆಳೆ ನಿರ್ವಹಣೆಗೆ ರೈತರಿಗೆ ಸಲಹೆ

ದಾವಣಗೆರೆ, ಏ. 7- ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಬೆಳವಣಿಗೆ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ನಿರೀಕ್ಷಿತ ಇಳುವರಿ ಪಡೆಯಲು ರೈತ ಬಾಂಧವರು ನಿರ್ದಿಷ್ಟ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ಕೃಷಿ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ.

ಜಿಲ್ಲೆಯಲ್ಲಿ ಭತ್ತದ ಬೆಳೆಯ ನಾಟಿ ಕಾರ್ಯ ಪೂರ್ಣಗೊಂಡಿದ್ದು, ಬೆಳೆಯು ಬೆಳವಣಿಗೆ ಹಂತದಲ್ಲಿದೆ. ನಾಟಿಯಾದ ಒಂದು ತಿಂಗಳಲ್ಲಿ ಕಳೆ ತೆಗೆದು ಎಕರೆಗೆ 12.5 ಕೆ.ಜಿ ಸಾರಜನಕ ಒದಗಿಸುವ ರಾಸಾಯನಿಕ ಗೊಬ್ಬರವನ್ನು ಕೊಡಬೇಕು ಅಥವಾ 1 ರಿಂದ 2 ಕೆ.ಜಿ ಅಜೋಸ್ಪೆರಿಲಿಯಂ ಜೈವಿಕ ಗೊಬ್ಬರವನ್ನು ಒಂದು ಪುಟ್ಟಿ ಕಾಂಪೋಸ್ಟ್ ಅಥವಾ ಯಾವುದೇ ಸಾವಯವ ಗೊಬ್ಬರದೊಂದಿಗೆ ಬೆರೆಸಿ ಕೊಡಬೇಕು. ಈ ಹಂತದಲ್ಲಿ ಕಾಂಡಕೊರಕ ಹುಳುವಿನ ಬಾಧೆ ಅಲ್ಲಲ್ಲಿ ಕಂಡುಬಂದಿದ್ದು, ರೈತರು ತ್ವರಿತವಾಗಿ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ. ಬೆಳವಣಿಗೆ ಹಂತದಲ್ಲಿ ಮರಿ ಹುಳು ಕಾಂಡವನ್ನು ಕೊರೆಯುವುದರಿಂದ ಸುಳಿಯು ಒಣಗಿದಂತಾಗಿ, ಬಾಧಿತ ಗಿಡದ ಸುಳಿಯು ಸುಲಭವಾಗಿ ಕಿತ್ತು ಬರುವುದು. ಪೈರು ತೆನೆ ಹಂತದಲ್ಲಿದ್ದಾಗ ಬಿಳಿ ತೆನೆಗಳಾಗಿ ಬೀಜ ಜೊಳ್ಳಾಗುವುದು.  ಇದು ಕಾಂಡಕೊರಕದ ಬಾಧೆಯ ಲಕ್ಷಣಗಳಾಗಿವೆ.  ಬೆಳೆಯ ಹಂತದಲ್ಲಿ ಕಾಂಡಕೊರಕದ ಬಾಧೆ ಕಂಡುಬಂದಲ್ಲಿ 3.5 ಮಿ.ಲೀ ಅಜಾಡಿರೆಕ್ಟಿನ್/ 1.5 ಮಿ.ಲೀ ಕ್ಲೋರೋಪೈರಿಫಾಸ್ 20% ಇ.ಸಿ/0.8 ಮಿ.ಲೀ ಫ್ಲುಬೆಂಡಿ ಅಮೈಡ್ 48 ಎಸ್.ಸಿ/0.2 ಗ್ರಾಂ ಫ್ಲುಬೆಂಡಿ ಅಮೈಡ್ 20 ಡಬ್ಲೂ.ಜಿ ಇವುಗಳಲ್ಲಿ ಯಾವುದಾದರೊಂದನ್ನು 01 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಎಕರೆಗೆ 250 ಲೀ. ನಿಂದ 300 ಲೀ. ಸಿಂಪರಣಾ ದ್ರಾವಣ ಬೇಕಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.