ಪರಿಚಿತನಂತೆ ನಟಿಸಿ ಸಂಚು ರೂಪಿಸಿ ದರೋಡೆ

ತಲೆ ಮರೆಸಿಕೊಂಡ ಪ್ರಮುಖ ಆರೋಪಿ: ಬಂಧನ

ದಾವಣಗೆರೆ, ಫೆ.28- ಪರಿಚಿತನಂತೆ ನಟಿಸಿ ಸಂಚು ರೂಪಿಸಿದ್ದ ಆರೋಪಿತನೋರ್ವ ನಾಲ್ವರ ಜೊತೆ ಸೇರಿ ದರೋಡೆ ಮಾಡಿದ್ದು, ಐವರ ಪೈಕಿ ನಾಲ್ವರು ಪೊಲೀಸರ ಅತಿಥಿಯಾಗಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.  ಬಂಧಿತರಿಂದ ದರೋಡೆ ಮಾಡಿದ್ದ 70 ಸಾವಿರ ರೂ. ಮೌಲ್ಯದ 20 ಗ್ರಾಂ ಬಂಗಾರದ ಸರವನ್ನು ಇಲ್ಲಿನ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ರೈಲ್ವೇ ಬ್ರಿಡ್ಜ್ ಮುಂದೆ ದೊಗ್ಗಳ್ಳಿ ರಸ್ತೆಯಲ್ಲಿ ಫೆ.24ರ ರಾತ್ರಿ 8 ಗಂಟೆಗೆ ಎಸ್. ಪ್ರಮೋದ ಎಂಬುವರಿಗೆ ಎರಡು ದಿನಗಳ ಹಿಂದೆ ಮೊಬೈಲ್ ಆಪ್ ಮೂಲಕ ಪರಿಚಯವಾಗಿದ್ದ ಅಭಿ ಎಂಬಾತನೊಂದಿಗೆ ಕಾರಿನಲ್ಲಿ ಹೋಗುವಾಗ ನಾಲ್ಕು ಜನ ಕಾರನ್ನು ಅಡ್ಡಗಟ್ಟಿ 70 ಸಾವಿರ ರೂ. ಬೆಲೆಯ 20 ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಹಲ್ಲೆ ಮಾಡಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಪ್ರಮೋದ ಅವರಿಗೆ ಪರಿಚಯವಾಗಿದ್ದ ಅಭಿ ಆತ್ಮೀಯನಂತೆ ನಟಿಸಿ, ನಾಲ್ಕು ಜನರೊಂದಿಗೆ ಸೇರಿಕೊಂಡು ಬಂಗಾರದ ಆಭರಣ ಹಾಗೂ ಹಣ ದೋಚಬೇಕೆಂದು  ಸಂಚು ರೂಪಿಸಿದ್ದಾನೆ. ಅಭಿ ತನ್ನ ಕಾರಿನಲ್ಲಿ ದೊಡ್ಡಬಾತಿ ರೈಲ್ವೆ ಬ್ರಿಡ್ಜ್ ಹತ್ತಿರ ಬಂದಾಗ, ನಾಲ್ಕು ಜನರು ಆಟೋದಲ್ಲಿ ಬಂದು ಕಾರಿಗೆ ಅಡ್ಡಹಾಕಿ ನಿಲ್ಲಿಸಿ, ಬಂಗಾರದ ಸರವನ್ನು ಕಿತ್ತುಕೊಂಡಿದ್ದು, ನಂತರ ಪಿರ್ಯಾದಿಗೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಭಿ ಯಾರಿಗೂ ಅನುಮಾನ ಬರಬಾರದು ಎಂದು ತಪ್ಪಿಸಿಕೊಂಡು ಹೋಗಿದ್ದ.